ಕೆ.ಆರ್.ಎಸ್ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ನಡೆದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಯಲ್ಲಪ್ಪರೆಡ್ಡಿ ಮಾತನಾಡಿದರು.
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ರೈತರ ಜಮೀನು ಕಿತ್ತುಕೊಂಡು, ಅವರ ಸಮಾಧಿಯ ಮೇಲೆ ಸರ್ಕಾರ ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲು ಹೊರಟಿರುವುದು ಎಷ್ಟು ಸರಿ?’ ಎಂದು ಪರಿಸರವಾದಿ ಎ.ಎನ್. ಯಲ್ಲಪ್ಪರೆಡ್ಡಿ ಖಾರವಾಗಿ ಪ‍್ರಶ್ನಿಸಿದರು.
ತಾಲ್ಲೂಕಿನ ಕೆ.ಆರ್.ಎಸ್ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ನಡೆದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
₹2663 ಕೋಟಿ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ಅನುಕೂಲ ಇಲ್ಲ. ಇದು ಮೋಜು, ಮಸ್ತಿ ಮಾಡುವ ಹಣವಂತರಿಗಾಗಿ ರೂಪಿಸುತ್ತಿರುವ ಯೋಜನೆ. ಪ್ರತಿ ದಿನ ಸಹಸ್ರಾರು ವಾಹನಗಳು ಇಲ್ಲಿಗೆ ಬಂದರೆ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯಲಿದೆ. ಕಾವೇರಿ ನದಿಯ ನೀರು ಕಲುಷಿತವಾಗಲಿದೆ. ಮಣ್ಣು ಕೂಡ ವಿಷಮಯವಾಗಲಿದೆ. ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದಲೂ ಈ ಯೋಜನೆ ಮಾರಕವಾದುದು ಎಂದು ಕಳವಳ ವ್ಯಕ್ತಪಡಿಸಿದರು.
‘ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವಾದರೆ ಪಾರಂಪರಿಕ ಬೃಂದಾವನ ಮತ್ತು ಸಂಗೀತ ಕಾರಂಜಿಗಳು ಮಹತ್ವ ಕಳೆದುಕೊಳ್ಳಲಿವೆ. ನೂರಾರು ವ್ಯಾಪಾರಿಗಳು ಬೀದಿಗೆ ಬೀಳುತ್ತಾರೆ. ತೆಂಗು ಬೆಳೆ ಅಭಿವೃದ್ಧಿ ಕೇಂದ್ರ, ಮೀನು ವಸ್ತುಸಂಗ್ರಹಾಲಯ, ಎಂಜಿನಿಯರಿಂಗ್ ಸಂಶೋಧನಾ ಕೇಂದ್ರಗಳು ಬಂದ್ ಆಗಲಿವೆ. 800 ಮಂದಿ ಹೊರ ಗುತ್ತಿಗೆ ನೌಕರರ ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಗ್ರಾ.ಪಂ. ಸದಸ್ಯ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಕೆ. ಬೋರಯ್ಯ, ಜಗದೀಶ್ ಕನ್ನಂಬಾಡಿ, ನಿವೃತ್ತ ಎಂಜಿನಿಯರ್ ದೇವರಾಜು, ಕೆ. ನಾಗೇಂದ್ರಸ್ವಾಮಿ, ಕೆಆರ್‌ಎಸ್ ಗ್ರಾ.ಪಂ. ಅಧ್ಯಕ್ಷ ರವಿಶಂಕರ್, ದಸಂಸ ಮುಖಂಡ ಕೃಷ್ಣ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ನಾರಾಯಣ ಮಾತನಾಡಿದರು. ಮಂಜೇಶಗೌಡ, ಪ್ರಕಾಶ್, ಮುದ್ದೇಗೌಡ, ಅರಕೆರೆ ಸೋಮಶೇಖರ್, ತಮ್ಮೇಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
1. ವಿಶ್ವ ಮಾನ್ಯತೆ ಪಡೆದಿರುವ ಕೆಆರ್‌ಎಸ್ ಅಣೆಕಟ್ಟೆ ಬಳಿ, ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಖಾಸಗಿಯವರಿಗೆ 34 ವರ್ಷಗಳಿಗೆ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ಕೊಡುವುದನ್ನು ಖಂಡಿಸುವುದು
2. ಅಮ್ಯೂಸ್‌ಮೆಂಟ್ ಪಾರ್ಕ್ ಉದ್ದೇಶಕ್ಕೆ ಬೃಂದಾವನವನ್ನು ನಾಶಪಡಿಸುವ ಜೀವ ವಿರೋಧಿ ಕ್ರಮವನ್ನು ತೀವ್ರವಾಗಿ ವಿರೋಧಿಸುವುದು
3. ಕೆಆರ್‌ಎಸ್ ಅಣೆಕಟ್ಟೆಯ ಭದ್ರತೆ ಮತ್ತು ಗ್ರಾಮೀಣ ಕೃಷಿ ಬದುಕು ನಾಶಪಡಿಸಿ ರೂಪಿಸುವ ₹2663 ಕೋಟಿ ವೆಚ್ಚದ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು
4. ಜನ ವಿರೋಧಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಿದರೆ ಸರ್ಕಾರದ ವಿರುದ್ಧವೇ ಪ್ರಕರಣ (ಎಫ್‌ಐಆರ್) ದಾಖಲಿಸುವುದು
5. ಕೆಆರ್‌ಎಸ್ ಅಣೆಕಟ್ಟೆಗೆ 100 ವರ್ಷ ತುಂಬುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಇದೇ ಹಣದಲ್ಲಿ ಸಮಾನಾಂತರ ಅಣೆಕಟ್ಟೆಯನ್ನು ನಿರ್ಮಿಸಬೇಕು.
6. ಅಣೆಕಟ್ಟೆಯ ಸಂಪೂರ್ಣ ನೀರನ್ನು ಕೃಷಿ ಚಟುವಟಿಕೆಗಳಿಗೆ ಮೀಸಲಿರಿಸಬೇಕು.
ಪೊರಕೆ, ಬಾರುಕೋಲು ಚಳವಳಿಯ ಎಚ್ಚರಿಕೆ
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ಬಳಿ ಅಮ್ಯೂಸ್ ಮೆಂಟ್ ಪಾರ್ಕ್ ಮಾಡಿದರೆ ಆಗುವ ಅನಾಹುತಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಲಾಗಿದೆ. ಈ ಭಾಗದ 6 ಗ್ರಾ.ಪಂ.ಗಳು ಈ ಯೋಜನೆಯನ್ನು ವಿರೋಧಿಸಿವೆ. ಈ ವಿಷಯದಲ್ಲಿ ಹಠ ಮಾಡಿದರೆ ಪೊರಕೆ ಮತ್ತು ಬಾರು ಕೋಲು ಚಳವಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಇದ್ದ ಸಮ್ಮಿಶ್ರ ಸರ್ಕಾರ ಕೂಡ ಇಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವ ಬಗ್ಗೆ ಪ್ರಸ್ತಾಪ ಮಾಡಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿತು. ಕೆಆರ್‌ಎಸ್ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ನ್ಯಾಯಾಲಯದ ಗಣಿಗಾರಿಕೆಯನ್ನು ನಿಷೇಧಿಸಿರುವಾಗ ಈ ಜನ ವಿರೋಧಿ ಯೋಜನೆ ಬಗ್ಗೆ ಈಗಿನ ಸರ್ಕಾರ ಆಸಕ್ತಿ ವಹಿಸುತ್ತಿರುವುದು ಸರಿಯಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಣೆಕಟ್ಟೆ ಕಾಯಿದೆಯನ್ನು ತಿಳಿದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.