ADVERTISEMENT

ಶ್ರೀರಂಗಪಟ್ಟಣ|ಉರುಳಿದ ಮರ: ದೇವಾಲಯಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 12:00 IST
Last Updated 27 ಮೇ 2025, 12:00 IST
ಶ್ರೀರಂಗಪಟ್ಟಣ ತಾಲ್ಲೂಕಿನ ಹೊಂಗಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಮೇಲೆ ಆಲದ ಮರ ಬಿದ್ದು ದೇವಾಲಯ ಜಖಂಗೊಂಡಿದೆ
ಶ್ರೀರಂಗಪಟ್ಟಣ ತಾಲ್ಲೂಕಿನ ಹೊಂಗಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಮೇಲೆ ಆಲದ ಮರ ಬಿದ್ದು ದೇವಾಲಯ ಜಖಂಗೊಂಡಿದೆ   

ಶ್ರೀರಂಗಪಟ್ಟಣ: ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ತಾಲ್ಲೂಕಿನ ಕೆಆರ್‌ಎಸ್‌ ಮತ್ತು ಹೊಂಗಹಳ್ಳಿಯಲ್ಲಿ ಮರಗಳು ಉರುಳಿ ಬಿದ್ದಿದ್ದು, ದೇವಾಲಯ ಮತ್ತು ಕಾಂಪೌಂಡ್‌ಗೆ ಹಾನಿಯಾಗಿದೆ.

ಹೊಂಗಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಮೇಲೆ ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್‌ ಆಲದ ಮರ ಬೇರು ಸಹಿತ ಬಿದ್ದಿದೆ. ಇದರಿಂದ ದೇವಾಲಯ ಕಳಶ ಮುರಿದಿದೆ. ಚಾವಣಿಯಲ್ಲಿ ಬಿರುಕು ಮೂಡಿದೆ. ಕಾಂಪೌಂಡ್‌ ಕೂಡ ಕುಸಿದಿದೆ.

ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕ್ವಾರ್ಟರ್ಸ್‌ ಬಳಿ ಕಾಂಪೌಂಡ್‌ ಮೇಲೆ ಮಳೆ ಮರ ಮತ್ತು ಬಸರಿ ಮರಗಳು ಬಿದ್ದಿವೆ. ಇದರ ಪಕ್ಕದಲ್ಲೇ ವಿದ್ಯುತ್‌ ಕಂಬವೊಂದು ನೆಲಕ್ಕುರಳಿದೆ.

ADVERTISEMENT

ಕುಸಿದ ಮನೆಗಳು:

ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ ಮಳೆಯಿಂದಾಗಿ ಮಂಜೇಶ್ ಎಂಬವರ ಹೆಂಚಿನ ಮನೆ ಭಾಗಶಃ ಕುಸಿದು ಬಿದ್ದಿದೆ. ಮೇಳಾಪುರದಲ್ಲಿ ಮನೆ ಕುಸಿದಿರುವ ಮಾಹಿತಿ ಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ಬನ್ನಹಳ್ಳಿ ಗ್ರಾಮದಲ್ಲಿ ನಂಜುಂಡೇಗೌಡ ಮತ್ತು ರಾಜು ಅವರಿಗೆ ಸೇರಿದ ತಲಾ ಒಂದು ಎಕರೆ ರಾಗಿ ಬೆಳೆ ಮಳೆಯಿಂದಾಗಿ ನೆಲ ಕಚ್ಚಿದೆ.

ಶಾಸಕ ಭೇಟಿ:

ತಾಲ್ಲೂಕಿನ ಹೊಂಗಹಳ್ಳಿ ಹಾಗೂ ಕೆಆರ್‌ಎಸ್‌ನಲ್ಲಿ ಮಳೆಯಿಂದ ಹಾನಿ ಸಂಭವಿಸಿರುವ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿದ್ದಿರುವ ಮರಗಳನ್ನು ಶೀಘ್ರ ತೆರವು ಮಾಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹೊಂಗಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ದುರಸ್ತಿಗೆ ಶೀಘ್ರ ಕ್ರಮ ವಹಿಸುವಂತೆ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಅವರಿಗೆ ಹೇಳಿದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜತೆಗಿದ್ದರು.

ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ವಸತಿ ಪ್ರದೇಶದಲ್ಲಿ ಮರ ಬಿದ್ದು ಹಾನಿ ಸಂಭವಿಸಿರುವ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು

ಮರಬಿದ್ದು ವ್ಯಾನ್ ಜಖಂ

ಕಿಕ್ಕೇರಿ ಪಟ್ಟಣದ ಎಪಿ‌ಎಂಸಿ ಮಾರುಕಟ್ಟೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಬೃಹತ್ ಮರ ಬಿದ್ದು ವ್ಯಾನ್‌ ಜಖಂಗೊಂಡಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಭಾನುವಾರ ತಡರಾತ್ರಿಯಿಂದ ಎಡಬಿಡದೆ ಸುರಿದ ಮಳೆ ಆರ್ಭಟಕ್ಕೆ ಭೂಮಿ ಹಸಿಯಾಗಿದ್ದ ಕಾರಣ ಮರ ಬುಡಮೇಲಾಗಿ ಕೆ.ಆರ್. ಪೇಟೆ ಮಾರ್ಗವಾಗಿ ಕಿಕ್ಕೇರಿ ಬರುತ್ತಿದ್ದ ಒಮ್ನಿ ವ್ಯಾನ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದ ಬಳಿ ನಿಲ್ಲಿಸಲಾಗಿದ್ದ ಸ್ಕೂಟಿ ಕೂಡ ಸಂಪೂರ್ಣ ಹಾಳಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ವಾತಾವರಣ ತಂಪು: ನಿರಂತರ ಮಳೆ ಶೀತಗಾಳಿಯಿಂದ ವಾತಾವರಣ ತಂಪಾಗಿದ್ದು ವಯೋವೃದ್ಧರು ಮಕ್ಕಳು ಮನೆಯಿಂದ ಹೊರಬರಲು ಆಗುತ್ತಿಲ್ಲ. ರೈತರು ಜಮೀನುಗಳಿಗೆ ತೆರಳಲು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.