ಮಳವಳ್ಳಿ: ಸ್ಥಳೀಯವಾಗಿ ಬೆಳೆದ ಬೆಳೆಗಳನ್ನು ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸಿಕೊಂಡು ಮಾರಾಟ ಮಾಡುವ ಮೂಲಕ ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.
ತಾಲ್ಲೂಕಿನ ಕಿರುಗಾವಲು ಗ್ರಾಮದ ಸುಲ್ತಾನ್ ರಸ್ತೆಯ ಭತ್ತ ವೈವಿಧ್ಯ ಕೇಂದ್ರದಲ್ಲಿ ಗುರುವಾರ ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಕೃಷಿ ಮತ್ತು ಗ್ರಾಮೀಣ ಭಾಗಗಳು ಎಲ್ಲ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ?’ ಎಂಬ ವಿಚಾರಗೋಷ್ಠಿಯಲ್ಲಿ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿಗೆ ಹೊಸ ದಾರಿಗಳು ಎಂಬ ವಿಚಾರವನ್ನು ಅವರು ಮಂಡಿಸಿದರು.
ಮಂಡ್ಯ ಜಿಲ್ಲೆ ಎಂದರೆ ಕೃಷಿ, ಕೃಷಿ ಎಂದರೆ ಮಂಡ್ಯ ಎಂಬ ಮಾತಿದೆ. ಆ ಪದ ಅರ್ಥಪೂರ್ಣವಾಗಬೇಕಿದ್ದರೆ ಮಂಡ್ಯದಿಂದ ವಲಸೆ ಹೋಗಿರುವ ಮಕ್ಕಳೆಲ್ಲ ತಮ್ಮ ತಮ್ಮ ಊರುಗಳಿಗೆ ಬಂದು ಕೃಷಿಯ ಮೂಲಕ ಜೀವನ ರೂಪಿಸಿಕೊಳ್ಳುವ ಕೆಲಸ ಮಾಡಿದಾಗ ಮಾತ್ರ ಅದು ಸಾಧ್ಯ. ಒಂದು ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಮತ್ತು ಉಪ ಉತ್ಪನ್ನಗಳಿಂದ ತಿಂಗಳಿಗೆ ಕನಿಷ್ಠ ₹20 ಸಾವಿರ ಆದಾಯ ಗಳಿಸುವ ನಿಟ್ಟಿನಲ್ಲಿ ಕೃಷಿ ಪದ್ಧತಿಗಳನ್ನು ಅವಳಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಳೆ ಬೆಳೆಯುವ ಪದ್ಧತಿ ಬದಲಾಗಬೇಕು, ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಲು ಇರುವ ನ್ಯೂನತೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು. ಸರ್ಕಾರ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ನೀಡಿಲ್ಲ ಎನ್ನುವ ಬದಲು ಉತ್ಪನ್ನಗಳಿಂದ ಉಪ ಉತ್ಪನ್ನಗಳನ್ನು ಮಾಡುವ ಹಾಗೂ ಸಣ್ಣ ಮಾರುಕಟ್ಟೆಗಳ ಸೃಷ್ಟಿಗೆ ಮುಂದಾಗಬೇಕು ಎಂದರು.
ಭೂಮಿಯ ಫಲವತ್ತತೆ ತಿಳಿದು ಕೃಷಿ ಮಾಡಬೇಕು. ಹವಾಮಾನ ಬದಲಾವಣೆಯಿಂದ ರೈತರಿಗೆ ಮಾತ್ರ ತೊಂದರೆಯಾಗುತ್ತದೆ. ಅಲ್ಲದೇ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಲೂ ರೈತರಿಗೆ ನಷ್ಟವಾಗುತ್ತದೆ. ಇದೆಲ್ಲ ಸವಾಲು ಎದುರಿಸುವ ಕೆಲಸ ರೈತರಿಂದ ಆಗುವಂತಾಗಬೇಕು. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ರೈತರ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಾಗನೂರಿನ ಮಹಿಳಾ ಕೃಷಿಕರಾದ ಪಿ.ಆರ್.ಕಿರಣ ಪಾಲ್ತಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.
ಭತ್ತ ವೈವಿಧ್ಯ ಕೇಂದ್ರದ ಸಯ್ಯದ್ ಘನಿಖಾನ್ ಪಾಲ್ಗೊಂಡಿದ್ದರು.
‘ರೈತರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು’ ಜಾಗೃತ ಕರ್ನಾಟಕ ರಾಜ್ಯ ಸಂಚಾಲಕ ಎಚ್.ವಿ.ವಾಸು ಮಾತನಾಡಿ 20ನೇ ಶತಮಾನದಲ್ಲಿದ್ದ ಸಂಘಟನೆ ಚಳವಳಿ ಹಾಗೂ ಹೋರಾಟದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧವಾಗಿ ನಡೆಸಿದ ಹೋರಾಟದ ರೀತಿಯಲ್ಲಿ ರೈತರು ಸಂಘಟಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ ಎಂದು ಹೇಳಿದರು. ಹೋರಾಟಗಳು ಜಾತ್ಯತೀತವಾಗಿ ನಡೆಯಬೇಕು. ಜಾತಿ ಮತ್ತು ಕೋಮು ಸಂಬಂಧಿತ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವವರ ಬಗ್ಗೆ ನಾವೆಲ್ಲರೂ ಜಾಗೃತರಾಗುವ ಜೊತೆಗೆ ರಾಜಕಾರಣವನ್ನು ವಿಭಿನ್ನವಾಗಿ ಕಲ್ಪಿಸಿಕೊಳ್ಳುವ ಪ್ರಯತ್ನ ನಡೆಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.