
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಬೆಂಗಳೂರು –ಮೈಸೂರು ಜೋಡಿ ರೈಲು ಮಾರ್ಗ ವಿಸ್ತರಣೆಗೆ ಸ್ವಾಧೀನ ಪಡೆದ ಕೃಷಿ ಜಮೀನಿಗೆ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಪಟ್ಟಣದ ರೈಲ್ವೆ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಬುಧವಾರ ಜಪ್ತಿ ಮಾಡಲಾಯಿತು.
ಪಟ್ಟಣದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಸೂಚನೆಯಂತೆ, ಕಚೇರಿಯ ಕುರ್ಚಿ, ಮೇಜು ಇತರ ಚರ ಸ್ವತ್ತುಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು. ಪರಿಹಾರ ಪಾವತಿಸುವವರೆಗೆ ಪೀಠೋಪಕರಣಗಳು ನ್ಯಾಯಾಲಯದ ವಶದಲ್ಲಿರುತ್ತವೆ ಎಂದು ತಿಳಿಸಿದರು.
ತಾಲ್ಲೂಕಿನ ಕಪರನಕೊಪ್ಪಲು ಗ್ರಾಮದ ರೈತ ಬಾಲಕೃಷ್ಣ ಅವರ 4 ಗುಂಟೆ ಜಮೀನನ್ನು ರೈಲ್ವೆ ಇಲಾಖೆ 2013ರಲ್ಲಿ ವಶಪಡಿಸಿಕೊಂಡಿತ್ತು. ಅದಕ್ಕೆ ₹50 ಲಕ್ಷ ಪರಿಹಾರ ನಿಗದಿ ಮಾಡಿದ್ದು, ಭಾಗಶಃ ಹಣವನ್ನು ಪಾವತಿಸಿತ್ತು. ಬಾಕಿ ಬಿಡುಗಡೆಗೆ ರೈತನ ಪರ ವಕೀಲ ಬಿ. ಕುಮಾರ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಶೇ 50ರಷ್ಟು ಪರಿಹಾರದ ನೀಡಬೇಕು ಎಂಬ ಸ್ಥಳೀಯ ಕೋರ್ಟ್ ಆದೇಶವನ್ನು ರೈಲ್ವೆ ಅಧಿಕಾರಿಗಳು ಪಾಲಿಸಿರಲಿಲ್ಲ. ಹೀಗಾಗಿ ಜಪ್ತಿ ಮಾಡುವಂತೆ ನ್ಯಾಯಾಧೀಶರಾದ ಮೋಹನ್‌ಗೌಡ ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.