ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ– ಕುಶಾಲನಗರ ಎಕ್ಸ್‌ಪ್ರೆಸ್ ವೇ ಜತೆಗೆ ಸರ್ವೀಸ್ ರಸ್ತೆಯನ್ನೂ ನಿರ್ಮಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಶನಿವಾರ ಬೆಳಗೊಳ ಬಳಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಪಾಲಹಳ್ಳಿ, ಬೆಳಗೊಳ ಹಾಗೂ ಶ್ರೀರಂಗಪಟ್ಟಣದ ರೈತರು ಬೆಳಗೊಳ ಬಳಿಯ ಗುರುಕುಲ ಶಿಕ್ಷಣ ಸಂಸ್ಥೆಯ ಬಳಿಗೆ ತೆರಳಿ ಕಾಮಗಾರಿಯನ್ನು ತಡೆದರು. ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್ಎಐ)ದ ಅಧಿಕಾರಿಗಳು ಹಾಗೂ ರೈತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಸರ್ವೀಸ್ ರಸ್ತೆ ನಿರ್ಮಿಸುವ ಭರವಸೆ ನೀಡುವವರೆಗೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
‘ಶ್ರೀರಂಗಪಟ್ಟಣ– ಕುಶಾಲನಗರ ಎಕ್ಸ್‌ಪ್ರೆಸ್ ವೇ ಗೆ ಸರ್ವೀಸ್ ರಸ್ತೆ ಇಲ್ಲದಿದ್ದರೆ ರೈತರು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ. ಹತ್ತಾರು ಕಿ.ಮೀ. ಸುತ್ತಿ ಬಳಸಿ ಓಡಾಡಬೇಕಾಗುತ್ತದೆ. ಬೆಳಗೊಳದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಒಂದೂವರೆ ವರ್ಷದ ಹಿಂದೆ ರೈತರು ಹಾಗೂ ಮುಖಂಡರ ಸಭೆ ನಡೆಸಿದ್ದರು. ಎಕ್ಸ್‌ಪ್ರೆಸ್ ವೇ ಜತೆಗೆ ಸರ್ವೀಸ್ ರಸ್ತೆಯನ್ನೂ ನಿರ್ಮಿಸಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದ್ದರು. ಆದರೆ ಎನ್‌ಎಚ್ಎಐ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ವೀಸ್ ರಸ್ತೆ ನಿರ್ಮಾಣ ಈ ಯೋಜನೆಯಲ್ಲಿ ಸೇರಿಲ್ಲ ಎಂದು ಹೇಳುತ್ತಿದ್ದಾರೆ. ಈ ದ್ವಂದ್ವ ಪರಿಹರಿಸಬೇಕು’ ಎಂದು ಮುಖಂಡ ಬೆಳಗೊಳ ಸುನಿಲ್ ಒತ್ತಾಯಿಸಿದರು.
‘ಎಕ್ಸ್‌ಪ್ರೆಸ್ ವೇ ಜತೆಗೆ ಸರ್ವೀಸ್ ರಸ್ತೆ ಇಲ್ಲದಿದ್ದರೆ ರೈತರಿಗೆ ತುಂಬಾ ತೊಂದರೆಯಾಗಲಿದೆ. ಈ ಸಮಸ್ಯೆಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ಸರ್ವೀಸ್ ರಸ್ತೆ ಮಾಡಿಸಿಕೊಡಬೇಕು’ ಎಂದು ಪಾಲಹಳ್ಳಿಯ ರೈತ ವೆಂಕಟೇಶ್ ಮನವಿ ಮಾಡಿದರು.
ರೈತರಾದ ವಿನಯ್, ಸುರೇಶ್, ಹರ್ಷ, ಚಲುವರಾಜು, ತಮ್ಮಣ್ಣ, ತಾಂಡವಮೂರ್ತಿ, ಹರೀಶ್, ಅಶ್ವತ್ಥ, ಸತ್ಯಣ್ಣ, ವಾಸು, ಚೇತನ್, ಹನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.