ADVERTISEMENT

ಸಂಭ್ರಮದ ವೆಂಕಟರಮಣಸ್ವಾಮಿ ರಥೋತ್ಸವ

ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದಲ್ಲಿ ನಡೆದ ಉತ್ಸವ; ವಿವಿಧೆಡೆ ಅನ್ನಸಂತರ್ಪಣೆ, ಪಾನಕ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:54 IST
Last Updated 1 ಮಾರ್ಚ್ 2021, 3:54 IST
ಶ್ರೀರಂಗಪಟ್ಟಣ ತಾಲ್ಲೂಕಿನ ಪುರಾಣ ಪ್ರಸಿದ್ಧ ಕರಿಘಟ್ಟದಲ್ಲಿ ಭಾನುವಾರ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ (ಎಡಚಿತ್ರ). ಕರಿಘಟ್ಟದ ಮೇಲಿರುವ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭಕ್ತರು ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು
ಶ್ರೀರಂಗಪಟ್ಟಣ ತಾಲ್ಲೂಕಿನ ಪುರಾಣ ಪ್ರಸಿದ್ಧ ಕರಿಘಟ್ಟದಲ್ಲಿ ಭಾನುವಾರ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ (ಎಡಚಿತ್ರ). ಕರಿಘಟ್ಟದ ಮೇಲಿರುವ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭಕ್ತರು ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕರಿಘಟ್ಟದಲ್ಲಿ ಭಾನುವಾರ ವೆಂಕಟ ರಮಣ ಸ್ವಾಮಿಯ ಬ್ರಹ್ಮ ರಥೋತ್ಸವದ ಸಡಗರ, ಸಂಭ್ರಮದಿಂದ ನಡೆಯಿತು.

ಚಂದ್ರವನ ಆಶ್ರಮ ಹಾಗೂ ಬೇಬಿ ಮಠದ ಪೀಠಾಧ್ಯಕ್ಷರಾದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಧ್ಯಾಹ್ನ 1.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ವಿ ರೂಪಾ ಸೇರಿದಂತೆ ಪ್ರಮುಖರು ಭಕ್ತರ ಜತೆಗೂಡಿ ರಥವನ್ನು ಎಳೆದರು. ಸರ್ವಾಲಂಕೃತ ಕಾಷ್ಠ ರಥವನ್ನು ದೇವಾಲಯದ ಸುತ್ತ ಎಳೆಯಲಾಯಿತು. ರಥವನ್ನು ಎಳೆಯುವಾಗ ಗೋವಿಂದ, ಶ್ರೀನಿವಾಸ, ವೆಂಕಟರಮಣ ಎಂಬ ಘೋಷಣೆಗಳು ಮೊಳಗಿದವು.

ADVERTISEMENT

ರಥೋತ್ಸವದಲ್ಲಿ ಯುವ ಜೋಡಿಗಳು ಹೆಚ್ಚು ಕಂಡು ಬಂದರು. ರಥಕ್ಕೆ ಹಣ್ಣು, ದವನ ಎಸೆದು ಭಕ್ತಿ, ಭಾವ ಪ್ರದರ್ಶಿಸಿದರು. ದೇವಾಲಯದ ಮುಂದೆ ಧೂಪ, ಕರ್ಪೂರ, ಈಡು ಗಾಯಿ ಸೇವೆಗಳು ನಡೆದವು.

ರಥೋತ್ಸವದ ನಿಮಿತ್ತ ವೆಂಕಟ ರಮಣಸ್ವಾಮಿಗೆ ಪಂಚಾಮೃತ ಅಭಿ ಷೇಕ, ವಿಶೇಷ ಪೂಜೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕ ಶ್ರೀನಿ ವಾಸ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ನಡೆದವು.

ಇದೇ ವೇಳೆ ಪದ್ಮಾವತಿ, ಯೋಗಾನರಸಿಂಹ, ಭೋಗನರಸಿಂಹ ದೇವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲದ ಪ್ರವೇಶ ದ್ವಾರದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು.

ಹಣ್ಣು, ಪಾನಕ: ರಥೋತ್ಸವಕ್ಕೆ ಬಂದ ಭಕ್ತರಿಗೆ ಹರಕೆ ಹೊತ್ತವರು ಹಣ್ಣು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ದೇವಾಲಯದ ಆಸುಪಾಸಿನಲ್ಲಿ ಮತ್ತು ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಅರವಟ್ಟಿಗೆಗಳಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಸಿಡಿಎಸ್‌ ನಾಲೆಯ ಏರಿಯ ಮೇಲೂ ಅನ್ನ ಸಂತರ್ಪಣೆ ನಡೆಯಿತು. ಬಿಸಿಲಿನ ಝಳದಿಂದ ಬಳಲಿದ ಭಕ್ತರನ್ನು ಹಣ್ಣು, ನೀರಿನ ಸೇವೆಗಳು ತಣಿಸಿದವು.

ಕರಿಘಟ್ಟ ಆಸುಪಾಸಿನ ಸಹಸ್ರಾರು ಮಂದಿ ರಥೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಮಂಡ್ಯ, ಮೈಸೂರು, ಬೆಂಗಳೂರು ಇತರ ಕಡೆಗಳಿಂದಲೂ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ಭಕ್ತರು ಹೆಚ್ಚು ಇದ್ದುದರಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.