ADVERTISEMENT

ಮಂಡ್ಯ ನಗರದಲ್ಲಿ ಭಯ, ಹಳ್ಳಿಗಳಲ್ಲಿ ಸಂಕ್ರಾಂತಿ ಸಂಭ್ರಮ

ಮಂಡ್ಯ ಮಾರುಕಟ್ಟೆಗಳಲ್ಲಿ ಕುಗ್ಗಿದ ಖರೀದಿ, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಅಲಂಕಾರ

ಎಂ.ಎನ್.ಯೋಗೇಶ್‌
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST
ಸಂಕ್ರಾಂತಿ ಹಬ್ಬದ ಅಂಗವಾಗಿ ರೈತರು ಮಂಡ್ಯದ ಪೇಟೆಬೀದಿಯಲ್ಲಿ ಜಾನುವಾರು ಅಲಂಕಾರ ಸಾಮಗ್ರಿ ಖರೀದಿ ಮಾಡುತ್ತಿರುವುದು
ಸಂಕ್ರಾಂತಿ ಹಬ್ಬದ ಅಂಗವಾಗಿ ರೈತರು ಮಂಡ್ಯದ ಪೇಟೆಬೀದಿಯಲ್ಲಿ ಜಾನುವಾರು ಅಲಂಕಾರ ಸಾಮಗ್ರಿ ಖರೀದಿ ಮಾಡುತ್ತಿರುವುದು   

ಮಂಡ್ಯ: ನಗರ, ಪಟ್ಟಣ ಪ್ರದೇಶದಲ್ಲಿ ಸಂಕ್ರಾಂತಿ ಸಂಭ್ರಮದ ಮೇಲೆ ಕೋವಿಡ್‌ ಕರಿನೆರಳು ಕವಿದಿದೆ. ಆದರೆ, ಹಳ್ಳಿಗಳಲ್ಲಿ ರೈತರು ಯಾವುದೇ ಭಯವಿಲ್ಲದೇ ಪ್ರತಿ ವರ್ಷದಂತೆ ಸುಗ್ಗಿ ಹಬ್ಬದ ಸಡಗರದಲ್ಲಿದ್ದಾರೆ

ಸಂಕ್ರಾಂತಿ ಹಬ್ಬದ ಮುನ್ನಾದಿನ ನಗರದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನಸಾಗರವೇ ಸೇರುತ್ತಿತ್ತು. ಕಬ್ಬಿನ ಜಲ್ಲೆ, ಬಾಳೆ ಕಂದು, ಮಾವಿನಸೊಪ್ಪು, ಗೆಣಸು, ಅವರೆ ಕಾರಿ, ಎಳ್ಳೆ–ಬೆಲ್ಲ ಮುಂತಾದ ವಸ್ತುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಮಾರುಕಟ್ಟೆಗಳಲ್ಲಿ ಆ ರೀತಿಯ ಖರೀದಿ ಭರಾಟೆ ಇರಲಿಲ್ಲ. ವಾರಾಂತ್ಯ ಕರ್ಫ್ಯೂ ಕೂಡ ಜಾರಿಯಲ್ಲಿದ್ದು ಜನರು ಖರೀದಿಗೆ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಕೂಡ ಕಡಿಮೆ ಸಂಖ್ಯೆಯಲ್ಲಿದ್ದರು.

ಎಪಿಎಂಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿವಿ ರಸ್ತೆ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಗತ್ಯ ವಸ್ತುಗಳ ಮಾರಾಟ ಮಾಡಲಾಯಿತು. ಆದರೆ ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿದ್ದರು, ವ್ಯಾಪಾರ ಕುಗ್ಗಿದ್ದ ಕಾರಣ ವರ್ತಕರು ಕೊರೊನಾ ಸೋಂಕಿಗೆ ಹಿಡಿಶಾಪ ಹಾಕಿದರು. ರಸ್ತೆಯುದ್ದಕ್ಕೂ ಸೇರುತ್ತಿದ್ದ ಜನಜಾತ್ರೆ ಮಾಯವಾಗಿದ್ದು ಹಬ್ಬದ ಸಂಭ್ರಮ, ಸಡಗರ ಮಾಯವಾಗಿತ್ತು.

ADVERTISEMENT

‘₹ 25 ಸಾವಿರ ವೆಚ್ಚ ಮಾಡಿ ಕಬ್ಬಿನ ಜಲ್ಲೆ ತಂದಿದ್ದೆ. ಆದರೆ ಈ ಬಾರಿ ಸಂಪೂರ್ಣವಾಗಿ ಮಾರಾಟವಾಗುತ್ತಿಲ್ಲ, ಹಾಕಿದ ಬಂಡವಾಳವೂ ಬರುತ್ತಿಲ್ಲ. ಕರ್ಫ್ಯೂ ಇರುವುದರಿಂದ ಶನಿವಾರ–ಭಾನುವಾರ ಮಾರಾಟ ನಡೆಯುವುದಿಲ್ಲ. ಹೀಗಾಗಿ ನಷ್ಟವಾಗುತ್ತಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಮನೆಯಲ್ಲೇ ಸಡಗರ: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಗರ, ಪಟ್ಟಣ ವಾಸಿಗಳು ಹಬ್ಬವನ್ನು ಮನೆಗಷ್ಟೇ ಸೀಮಿತಗೊಳಿಸಿದ್ದಾರೆ. ಈಗಾಗಲೇ ಎಳ್ಳು–ಬೆಲ್ಲ ಸಿದ್ಧವಾಗಿದ್ದು ಆಪ್ತರಿಗೆ ಮಾತ್ರ ಎಳ್ಳುಬೀರಿ ಸಂಕ್ರಾಂತಿ ಶುಭಾಶಯ ಹಂಚಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರು ಕೂಡ, ಮನೆಯಲ್ಲೇ ಹಬ್ಬ ಆಚರಿಸುವಂತೆ ಸೂಚನೆ ನೀಡಿದ್ದಾರೆ. ಕರ್ಫ್ಯೂ ಇರಲಿದ್ದು ಶನಿವಾರ–ಭಾನುವಾರ ಜನರು ಹೊರಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಹಳ್ಳಿಗಳಲ್ಲಿ ಸಂಭ್ರಮ: ನಗರ, ಪಟ್ಟಣಗಳಲ್ಲಿ ಹಬ್ಬದ ಸಂಭ್ರಮ ಇಲ್ಲದಿದ್ದರೂ ಗ್ರಾಮೀಣ ಭಾಗದ ಜನರಿಗೆ ಕೊರೊನಾ ಸೋಂಕಿನ ಭಯ ಇಲ್ಲವಾಗಿದೆ. ಪ್ರತಿ ವರ್ಷದಂತೆ ಹಳ್ಳಿಜನರು ಜಾನುವಾರು, ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿದ್ದು ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಿದ್ದಾರೆ. ಕರ್ಫ್ಯೂ ಇದ್ದರೂ ಹಳ್ಳಿಗಳಲ್ಲಿ ಜನರ ಓಡಾಟಕ್ಕೆ, ಹಬ್ಬದ ಆಚರಣೆಗೆ ಯಾವುದೇ ಅಡ್ಡಿ, ಆತಂಕಗಳಿಲ್ಲ. ಹೀಗಾಗಿ ಹಬ್ಬದ ಆಚರಣೆ ಪ್ರತಿ ವರ್ಷದಂತೆ ಸಂಭ್ರಮದಿಂದ ನಡೆಯಲಿದೆ.

ಹಳ್ಳಿ ಜನರು ಕೆರೆ, ಕಾಲುವೆಗಳಲ್ಲಿ ಶುಕ್ರವಾರ ಜಾನುವಾರುಗಳನ್ನು ತೊಳೆದರು. ಹಸು, ಎತ್ತುಗಳಿಗೆ ಅಲಂಕಾರ ಮಾಡಲು ಅಗತ್ಯ ಸಾಮಗ್ರಿಗಳನ್ನು ನಗರದ ಪೇಟೆಬೀದಿ ಸೇರಿದಂತೆ ವಿವಿಧೆಡೆ ಖರೀದಿ ಮಾಡಿದರು. ಅಲಂಕಾರಕ್ಕೆ ಅಗತ್ಯವಾಗಿರುವ ಟೇಪು, ಹಗ್ಗ, ಕುಣಿಕೆಗಳು, ಬಣ್ಣದ ದಾರಗಳು, ಗಂಟೆ, ಕುಂಕುಮ ಖರೀದಿಯಲ್ಲಿ ತೊಡಗಿದ್ದರು. ಪೇಟೆಬೀದಿಯ ಸಾಲು ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರವಾಯಿತು.

‘ಮೊದಲಿನಿಂದಲೂ ಹಳ್ಳಿಗಳು ಸುರಕ್ಷಿತವಾಗಿದ್ದು ಕೋವಿಡ್‌ ಭಯವಿಲ್ಲ. ಸಂಕ್ರಾಂತಿ ಹಬ್ಬ ರೈತರಿಗೆ ಅತ್ಯಂತ ಪವಿತ್ರವಾದುದು. ಹೀಗಾಗಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದೇವೆ’ ಎಂದು ರೈತ ನಾಗರಾಜೇಗೌಡ ಹೇಳಿದರು.

********

ಕಿಚ್ಚು ಹಾಯಿಸಲು ಅವಕಾಶ ಕೊಡಿ

ಶನಿವಾರ–ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು ಸಂಕ್ರಾಂತಿ ಹಬ್ಬದ ಅಂಗವಾಗಿ ಕಿಚ್ಚು ಹಾಯಿಸಲು ಅವಕಾಶ ಇರುವುದಿಲ್ಲ. ಪ್ರತಿವರ್ಷ ನಗರದ ಜಿಲ್ಲಾ ಕ್ರೀಡಾಂಗಣ, ಹೊಸಹಳ್ಳಿ, ಗುತ್ತಲು ಬಡಾವಣೆಗಳಲ್ಲಿ ರೈತರು ಕಿಚ್ಚು ಹಾಯಿಸುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಪೊಲೀಸರು ಅವಕಾಶ ನೀಡಿಲ್ಲ. ಆದರೂ ಕೆಲ ರೈತರು ಸಾಂಪ್ರದಾಯಿಕವಾಗಿ, ಸರಳವಾಗಿ ಕಿಚ್ಚಿ ಹಾಯಿಸಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

ಹಳ್ಳಿಗಳಲ್ಲಿ ರೈತರು ಸಂಭ್ರಮದಿಂದ ಕಿಚ್ಚು ಹಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ಗ್ರಾಮಗಳಲ್ಲಿ ಯಾವುದೇ ಭದ್ರತೆ ಇಲ್ಲದ ಕಾರಣ ಹಳ್ಳಿ ಜನರು ಎಂದಿನಂತೆ ಹಬ್ಬ ಆಚರಣೆ ಮಾಡಲಿದ್ದಾರೆ, ಕಿಚ್ಚು ಹಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.