ADVERTISEMENT

ಶ್ರೀರಂಗಪಟ್ಟಣ: ಸರ್ಕಾರಿ ವಾಹನದಲ್ಲಿ ಬೆಂಕಿ, ಕಡತ ನಾಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 4:34 IST
Last Updated 22 ಏಪ್ರಿಲ್ 2021, 4:34 IST
ಶ್ರೀರಂಗಪಟ್ಟಣ ಮಿನಿ ವಿಧಾನಸೌಧ ಎದುರು ನಿಲ್ಲಿಸಿದ್ದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ವಾಹನಕ್ಕೆ ಬುಧವಾರ ಬೆಂಕಿ ಹೊತ್ತಿಕೊಂಡಿತ್ತು
ಶ್ರೀರಂಗಪಟ್ಟಣ ಮಿನಿ ವಿಧಾನಸೌಧ ಎದುರು ನಿಲ್ಲಿಸಿದ್ದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ವಾಹನಕ್ಕೆ ಬುಧವಾರ ಬೆಂಕಿ ಹೊತ್ತಿಕೊಂಡಿತ್ತು   

ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಎದುರು ನಿಲ್ಲಿಸಿದ್ದ ಸರ್ಕಾರಿ ವಾಹನಕ್ಕೆ ಬುಧವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ವಾಹನ ಭಾಗಶಃ ಸುಟ್ಟು ಹೋಗಿದೆ.

ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪ ನಿರ್ದೇಶಕರೂ ಆಗಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಕಾರ್ಯ ನಿಮಿತ್ತ ಈ ವಾಹನದಲ್ಲಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆಗೆ ಸೇರಿದ ವಾಹನ (ಕೆ.ಎ–55, ಸಿ–320)ದಿಂದ ಇಳಿದು ಒಳ ಹೋದ 10 ನಿಮಿಷಗಳಲ್ಲಿ ವಾಹನದ ಎಂಜಿನಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಹೊತ್ತಿಕೊಂಡಿದೆ.

ವಾಹನದ ಚಾಲಕ, ಮಿನಿ ವಿಧಾನಸೌಧದ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು. ವಾಹನದ ಎಂಜಿನ್‌, ಸೀಟುಗಳು ಇತರ ವಸ್ತುಗಳು ಸುಟ್ಟಿದೆ.

ADVERTISEMENT

‘ವಾಹನದ ಒಳಗೆ ಇರಿಸಿದ್ದ ಕಂದಾಯ ಇಲಾಖೆಗೆ ಸೇರಿದ ಕೆಲವು ಫೈಲ್‌ಗಳು ಸುಟ್ಟು ಹೋಗಿವೆ. ಅರ್ಧ ಗಂಟೆ ಮೊದಲೇ ಬೆಂಕಿ ಅವಘಡ ನಡೆದಿದ್ದರೆ ಒಳಗೆ ಇರಿಸಿದ್ದ ನೂರಾರು ಫೈಲ್‌ಗಳು ಸುಟ್ಟು ಹೋಗುತ್ತಿದ್ದವು’ ಎಂದು ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ ತಿಳಿಸಿದರು.

‘ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.