ADVERTISEMENT

ಹಲಗೂರು: ಕಿಡಿಗೇಡಿಗಳಿಂದ ಬೆಂಕಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:06 IST
Last Updated 8 ಫೆಬ್ರುವರಿ 2026, 4:06 IST
ಹಲಗೂರು ಸಮೀಪದ ಭೀಮಾ ನದಿ ತಪ್ಪಲಿನ ಜನವಸತಿ ಪ್ರದೇಶದಲ್ಲಿ ಆವರಿಸಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು 
ಹಲಗೂರು ಸಮೀಪದ ಭೀಮಾ ನದಿ ತಪ್ಪಲಿನ ಜನವಸತಿ ಪ್ರದೇಶದಲ್ಲಿ ಆವರಿಸಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು    

ಹಲಗೂರು: ಪ್ರತ್ಯೇಕ ಎರಡು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು ಕರಕಲಾದ ಘಟನೆ ಹಲಗೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಹಲಗೂರು ಕೆರೆ ಕೋಡಿ ಅಂಚಿನಲ್ಲಿರುವ ಪಟ್ಟಲದಮ್ಮ ದೇವಸ್ಥಾನದ ಹಿಂಭಾಗದ ಸುಮಾರು ನಾಲ್ಕೈದು ಎಕರೆ ಭೂ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಮರ ಗಿಡಗಳು ಮತ್ತು ಸಮೀಪದ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆಗಳು ಬೆಂಕಿಗೆ ಆಹುತಿಯಾಗಿವೆ. ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ನಿಯಂತ್ರಣ ತಪ್ಪಿ ವ್ಯಾಪಕವಾಗಿ ಹರಡಿದೆ. ನಂತರ ವಾಸು ಬಾರ್ ಹಿಂಭಾಗದ ಭೀಮಾ ನದಿ ಬಫರ್ ವಲಯ ಹಾಗೂ ಚೌಕಿ ಮಠದವರೆಗೆ ಹರಡಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.

ಹಲಗೂರು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಅಗ್ನಿ ಅವಘಡಗಳು ಸಂಭವಿಸಿದರೇ ಮಳವಳ್ಳಿ ಪಟ್ಟಣದಿಂದ ಅಗ್ನಿ ಶಾಮಕ ವಾಹನಗಳು ಅವಘಡ ಸ್ಥಳಕ್ಕೆ ಬರುವಷ್ಟರಲ್ಲಿ ಅಪಾರ ಪ್ರಮಾಣದ ಮೌಲ್ಯಯುತ ವಸ್ತುಗಳು ಬೆಂಕಿಗೆ ಅಹುತಿಯಾಗುತ್ತಿವೆ. ಬಸವನಬೆಟ್ಟ, ಮುತ್ತತ್ತಿ ಅರಣ್ಯ ಪ್ರದೇಶಗಳಿದ್ದು ಹಲಗೂರಿನಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮದ ಕೆ.ಜಿ.ಸಿದ್ದಲಿಂಗಮೂರ್ತಿ ಆಗ್ರಹಿಸಿದರು.

ADVERTISEMENT

ಬೇಸಿಗೆ ಆರಂಭ ಹಂತದಲ್ಲಿದ್ದು, ಒಣಗಿದ ಗಿಡಗಂಟಿಗಳು ಮತ್ತು ತರಗೆಲೆಗಳಿಗೆ ಬೆಂಕಿ ತಗುಲಿದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಮಾಹಿತಿ ನೀಡದೇ ಬೆಂಕಿ ಹಚ್ಚುವುದು ಭಾರಿ ನಷ್ಟಕ್ಕೆ ಕಾರಣವಾಗುತ್ತದೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸಿದ್ದರಾಮಯ್ಯ, ಮೋಹನ್ ಕುಮಾರ್, ಗಗನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.