ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯ ದಿಂದ ಶನಿವಾರ 75 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಟ್ಟಿರುವುದರಿಂದ ಕಾವೇರಿ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿದೆ.
ಕೆಆರ್‌ಎಸ್ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಕೇಂದ್ರ ಸಂಪೂರ್ಣ ಮುಳುಗಿದೆ. ಐಬಿಸ್, ಇಗ್ರೆಟ್ ಸೇರಿದಂತೆ ಇತರೆ ಜಾತಿಯ ಪಕ್ಷಿಗಳು ಎತ್ತರದ ಮರಗಳ ಮೇಲೆ ಆಶ್ರಯ ಪಡೆದಿವೆ.
ಪಶ್ಚಿಮವಾಹಿನಿಯ ಐತಿ ಹಾಸಿಕ ದೇಗುಲಗಳು ಭಾಗಶಃ ಜಲಾವೃತವಾಗಿವೆ. ಸಾಯಿಬಾಬಾ ಆಶ್ರಮದ ಒಳಕ್ಕೆ ನೀರು ನುಗ್ಗಿದೆ. ಪಟ್ಟಣದ ಜೀಬಿ ಗೇಟ್ ಬಳಿ ಚಂದ್ರಮೌಳೇಶ್ವರ ದೇವಾಲಯ ಸಂಪೂರ್ಣ ಮುಳುಗಿದೆ. ಚಂದ್ರವನ ಅಶ್ರಮದ ಬಳಿ ನದಿಯ ಮಧ್ಯೆ ಇರುವ ಗೌತಮ ಮಂಟಪ ಅರ್ಧ ಮುಳುಗಿದೆ. ಬಿದ್ದುಕೋಟೆ ಗಣೇಶ ದೇವಾಲಯ, ಆಂಜನೇಯಸ್ವಾಮಿ ದೇಗುಲಗಳಿಗೂ ನೀರು ಹರಿದಿದೆ.
ಪಟ್ಟಣದ ಪಶ್ಚಿಮಕ್ಕಿರುವ ಗೌತಮ ಕ್ಷೇತ್ರ ನಡುಗಡ್ಡೆ ಅರ್ಧ ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ.
ಅಂಬೇಡ್ಕರ್ ಭವನದ ಸಮೀಪದ ಶ್ರೀರಾಮಕೃಷ್ಣ ವಿವೇಕಾನಂದ ಮಠದ ಸ್ವಾಮಿ ಗದಾಧರ ಮಠ ತೊರೆದಿದ್ದಾರೆ. ತಾಲ್ಲೂಕಿನ ರಾಂಪುರ, ಗಂಜಾಂ, ನಗುವನಹಳ್ಳಿ, ಮೇಳಾಪುರ, ಚಂದಗಾಲು, ಮರಳಾಗಾಲ, ಮಹ ದೇವಪುರ, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಮಣಿಗೌಡನಹುಂಡಿ ಬಳಿ ನದಿ ತೀರದ ಜಮೀನುಗಳು ಜಲಾವೃತವಾಗಿವೆ. ಕಬ್ಬು, ತೆಂಗು, ಬಾಳೆ ತೋಟಗಳಿಗೆ ನೀರು ನುಗ್ಗಿದೆ.
ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ತಳ ಸ್ಪರ್ಶಿಸಲು ಮೂರು ಅಡಿ ಅಂತರದಲ್ಲಿ ನೀರು ಹರಿಯುತ್ತಿದೆ. ಅತ್ತ ಬಂಗಾರದೊಡ್ಡಿ
ನಾಲೆಗೆ ಕಟ್ಟಿರುವ ಅಕ್ವಡಕ್ (ಪಿರಿಯಾಪಟ್ಟಣ ಸೇತುವೆ)ನ ತಳ ಸ್ಪರ್ಶಿಸಲು ಕೆಲವೇ ಅಡಿ ಬಾಕಿ ಇದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿರುವ ದೃಶ್ಯವನ್ನು ಪಟ್ಟಣ ಹಾಗೂ ಆಸುಪಾಸಿನ ಗ್ರಾಮಗಳ ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ನದಿ ತೀರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.