ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದ ಸಿದ್ದೇಗೌಡ ಅವರ ಕನಕಾಂಬರ ಹೂವಿನ ಬೆಳೆ ಕಾವೇರಿ ನದಿಯ ಪ್ರವಾಹದಲ್ಲಿ ಮುಳುಗಿರುವುದು
ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ನದಿ ತೀರದ ತೋಟ, ಕೃಷಿ ಬೆಳೆಗಳು ನೀರಿನಲ್ಲಿ ಮುಳುಗಿದ್ದು ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ, ಬಾಬುರಾಯನಕೊಪ್ಪಲು, ಗಂಜಾಂ, ಮರಳಾಗಾಲ, ಚಿನ್ನಾಯಕನಹಳ್ಳಿ, ಚಿಕ್ಕಪಾಳ್ಯ, ಹಂಗರಹಳ್ಳಿ, ದೊಡ್ಡಪಾಳ್ಯ, ಶಾಂತಿಕೊಪ್ಪಲು, ಮಹದೇವಪುರ ಗ್ರಾಮಗಳ ಸರಹದ್ದಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.
ಚಿಕ್ಕಪಾಳ್ಯ ಗ್ರಾಮದ ಸಿದ್ದೇಗೌಡ, ಅಶೋಕ, ಸೋಮೇಶ, ಯೋಗೇಶ್, ಕುಮಾರ, ಹಂಗರಹಳ್ಳಿ ಮಹಲಿಂಗು ಅವರ ಜಮೀನಿನಲ್ಲಿ ಬೆಳೆದಿದ್ದ ಕನಕಾಂಬರ, ಕಾಕಡ ಹೂವಿನ ತೋಟಗಳು ನೀರಿನಲ್ಲಿ ಮುಳುಗಿವೆ. ದೊಡ್ಡಪಾಳ್ಯ ಗ್ರಾಮದ ಗೋವಿಂದೇಗೌಡ, ರವಿ, ಪುಟ್ಟೇಗೌಡ, ಮಾಯಿಕೃಷ್ಣ, ರುಕ್ಮಿಣಿ ಅವರ ಕಬ್ಬು ಬೆಳೆ ಜಲಾವೃತವಾಗಿದೆ. ಶಾಂತಿಕೊಪ್ಪಲು ಗ್ರಾಮದ ರಾಮಕೃಷ್ಣ ಅವರ ಭತ್ತ ಪೈರುಗಳು ನೀರು ತುಂಬಿಕೊಂಡ ಕಾರಣ ಕೊಳೆತುಹೋಗಿವೆ.
‘15 ಗುಂಟೆ ಜಮೀನನ್ನು ಗುತ್ತಿಗೆ ಪಡೆದು ಕನಕಾಂಬರ ಹೂವಿನ ಬೆಳೆ ಬೆಳೆಯಲು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ನದಿಯಲ್ಲಿ ಪ್ರವಾಹ ಬಂದು ಬೆಳೆ ಸಂಪೂರ್ಣ ನಾಶವಾಗಿದೆ. ಏನು ಮಾಡಬೇಕೋ ದಿಕ್ಕೇ ತೋಚುತ್ತಿಲ್ಲ’ ಎಂದು ಚಿಕ್ಕಪಾಳ್ಯದ ರೈತ ಸಿದ್ದೇಗೌಡ ಕಣ್ಣೀರು ಹಾಕಿದರು.
‘ಕೆಆರ್‌ಎಸ್ ಅಣೆಕಟ್ಟೆಯಿಂದ 1.5 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಿದರೆ ನದಿ ತೀರದಲ್ಲಿರುವ 220 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ನದಿ ತೀರಕ್ಕೆ ರೈತರು ಮತ್ತು ಇತರ ಯಾರೂ ತೆರಳದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.
1.10 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಜಲಾಶಯದಿಂದ ಸುಮಾರು 1,10,000 ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಕುಮಾರ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.