ADVERTISEMENT

ಮೇಲುಕೋಟೆಯಲ್ಲಿ ಮಂಜಿನ ವಾತಾವರಣ

ಯದುಗಿರಿ ಬೆಟ್ಟದಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ: ‍ಪ್ರವಾಸಿಗರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:40 IST
Last Updated 23 ಅಕ್ಟೋಬರ್ 2020, 2:40 IST
ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ರಾಜಗೋಪರದ ಮೇಲೆ ಮಂಜಿನ ಅನಾವರಣ
ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ರಾಜಗೋಪರದ ಮೇಲೆ ಮಂಜಿನ ಅನಾವರಣ   

ಮೇಲುಕೋಟೆ: ಇಲ್ಲಿಯ ಯದುಗಿರಿ ಬೆಟ್ಟದಲ್ಲಿ ಮುಂಜಾನೆ ಮಂಜಿನ ನರ್ತನದ ದೃಶ್ಯವೈಭವ ನೋಡುಗರ ಕಣ್ಣಿಗೆ ಕಟ್ಟುತ್ತಿದೆ. ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಪಟ್ಟಣದ ರಸ್ತೆಗಳ ಮೇಲೂ ಮಂಜು ಚಾಚಿಕೊಳ್ಳುತ್ತಿದ್ದು, ಚುಮುಚುಮು ಚಳಿ ಕಚಗುಳಿ ನೀಡುತ್ತಿದೆ.

ಪ್ರತಿದಿನ ಹತ್ತು ಅಡಿ ದೂರದ ವಸ್ತುವೂ ಕಾಣದಂತೆ ಮಂಜು ಮುಸುಕುತ್ತದೆ. ಇನ್ನು ಸಂಜೆಯಾಗುತ್ತಿದ್ದಂತೆ ಮಲೆನಾಡಿನಂತೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಗುರುವಾರ ಮುಂಜಾನೆ 6ರಿಂದ 9-30 ಗಂಟೆಯವರೆಗೂ ಮಂಜು ಹಾಗೆಯೇ ಇತ್ತು.

ಸಾಮಾನ್ಯವಾಗಿ ನವೆಂಬರ್ ಅಂತ್ಯ, ಡಿಸೆಂಬರ್, ಜನವರಿ ತಿಂಗಳಲ್ಲಿ ಆರಂಭವಾಗುತ್ತಿದ್ದ ಚಳಿ ಈ ವರ್ಷ ಅಕ್ಟೋಬರ್‌ನಲ್ಲೇ ಆರಂಭವಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ, ನರಸಿಂಹಸ್ವಾಮಿ ಬೆಟ್ಟದ ಮಧ್ಯೆ ಮಂಜಿನಾಟ ನೋಡುವುದೇ ವಿಶಿಷ್ಟ ಅನುಭವ.

ADVERTISEMENT

ಭಕ್ತರಿಗಂತೂ ಈ ದೃಶ್ಯಗಳು ನಯನಮನೋಹರವಾಗಿದೆ. ಬೆಳಗಿನ ವಾಕಿಂಗ್ ಮಾಡುವವರು, ಹಾಲು, ತರಕಾರಿ, ಮಾರುವರರು, ಪತ್ರಿಕಾ ವಿತರಕರು, ದೇವಾಲಯದ ಕೈಂಕರ್ಯಪರರು ಬೆಳ್ಳಂಬೆಳಿಗ್ಗೆ ವಿಶಿಷ್ಟ ಅನುಭವ ಪಡೆಯುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲೇ ಮೇಲುಕೋಟೆಯಲ್ಲಿ ಅತೀ ಹೆಚ್ಚು ಚಳಿ ದಾಖಲಾಗುತ್ತದೆ. ಚಳಿಯ ತೀವ್ರತೆ ಗರಿಷ್ಠ 21 ರಿಂದ ಕನಿಷ್ಠ 18 ಡಿಗ್ರಿಯವರೆಗೂ ತಲುಪುತ್ತದೆ. ಇದಕ್ಕಿಂತಲೂ ಕಡಿಮೆಯಾದ ನಿದರ್ಶನವೂ ಇದೆ. ಧನುರ್ಮಾಸದ ಪೂಜೆಗೆ ಬರುವ ಭಕ್ತರಿಗೆ ಭಕ್ತಿಯ ನಡುವೆ ಚಳಿ ಏನೂ ಇಲ್ಲ ಎನಿಸುತ್ತದೆ.

‘ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆ, ಕಟ್ಟೆ ಕೊಳ ಮತ್ತು ಕಲ್ಯಾಣಿಯಲ್ಲಿ ಹೆಚ್ಚಿನ ನೀರು ತುಂಬಿದೆ. ತೊಟ್ಟಲಮಡು ಸಹ ತುಂಬಿ ಹರಿಯುತ್ತಿದೆ. ಇದು ಭಕ್ತರಿಗೆ ಉಲ್ಲಾಸ ನೀಡುತ್ತಿದೆ’ ಎಂದು ಪಟ್ಟಣದ ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.