ADVERTISEMENT

ಗಮನ ಸೆಳೆದ ಆಹಾರ ಮೇಳ, ಮಕ್ಕಳ ಸಂತೆ: ಭರ್ಜರಿ ವ್ಯಾಪಾರ ಮಾಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:36 IST
Last Updated 4 ಜನವರಿ 2026, 6:36 IST
ಶ್ರೀರಂಗಪಟ್ಟಣದಲ್ಲಿ ಕಾವೇರಿ ವಿದ್ಯಾ ಸಂಸ್ಥೆ ಹಾಗೂ ಬಿಜಿಎಸ್‌ ಬಾಲ ಜಗತ್‌ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಮೇಳ ಹಾಗೂ ಮಕ್ಕಳ ಸಂತೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಂದ ಹಣ್ಣು, ತರಕಾರಿ ಖರೀದಿಸಿದರು
ಶ್ರೀರಂಗಪಟ್ಟಣದಲ್ಲಿ ಕಾವೇರಿ ವಿದ್ಯಾ ಸಂಸ್ಥೆ ಹಾಗೂ ಬಿಜಿಎಸ್‌ ಬಾಲ ಜಗತ್‌ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಮೇಳ ಹಾಗೂ ಮಕ್ಕಳ ಸಂತೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಂದ ಹಣ್ಣು, ತರಕಾರಿ ಖರೀದಿಸಿದರು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಕಾವೇರಿ ವಿದ್ಯಾ ಸಂಸ್ಥೆ ಹಾಗೂ ಬಿಜಿಎಸ್‌ ಬಾಲ ಜಗತ್‌ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಮೇಳ ಮತ್ತು ಮಕ್ಕಳ ಸಂತೆ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮಾರಾಟಕ್ಕೆ ಇರಿಸಿದ್ದರು. ಮಿಠಾಯಿ, ಪೆಪ್ಪರ್‌ಮಿಂಟ್, ಚಕ್ಕುಲಿ, ಕೋಡುಬಳೆ, ಲಡ್ಡು, ಚುರುಮುರಿ ಕಂಡು ಬಂದವು. ಸೌತೆಕಾಯಿ, ತೆಂಗಿನ ಕಾಯಿ, ಹೀರೇಕಾಯಿ, ಬೆಂಡೆ ಕಾಯಿ, ಮೂಲಂಗಿ, ಟೊಮೆಟೊ ಇತರ ತರಕಾರಿಗಳು ಹಾಗೂ ವಿವಿಧ ಸೊಪ್ಪುಗಳನ್ನು ಮಾರಾಟಕ್ಕೆ ತಂದಿದ್ದರು. ಸಪೋಟ, ಮೂಸಂಬಿ, ಕಿತ್ತಳೆ, ಪಪ್ಪಾಯಿ, ಬಾಳೆ ಹಣ್ಣುಗಳನ್ನೂ ಮಾರಾಟ ಮಾಡಿ ಹಣ ಗಳಿಸಿದರು. ನುರಿತ ವ್ಯಾಪಾರಿಗಳಂತೆ ಚೌಕಾಸಿ ಮಾಡುತ್ತಾ ಮಾರಾಟ ಮಾಡಿದರು. ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮಗೆ ಅಗತ್ಯವಾದ ಹಣ್ಣು, ತರಕಾರಿ ಮತ್ತು ತಿನಿಸುಗಳನ್ನು ಖರೀದಿಸಿದರು.

ಕೆಲವು ವಿದ್ಯಾರ್ಥಿಗಳು ಶುದ್ಧ ಹಾಗೂ ಪೌಷ್ಠಿಕ ಆಹಾರ ಸೇವನೆಯ ಅಗತ್ಯ ಕುರಿತು ಜಾಗೃತಿ ಮೂಡಿಸಿದರು. ರಾಗಿ, ಅಕ್ಕಿ, ಗೋಧಿ ಸೇರಿದಂತೆ ವಿವಿಧ ಕಾಳುಗಳಿಂದ ರಚಿಸಿದ್ದ ಪಕ್ಷಿ, ಆನೆ, ಕರ್ನಾಟಕದ ನಕ್ಷೆ, ಮೀನು, ಗಡಿಯಾರ, ಮಕ್ಕಳು ಶಾಲೆಗೆ ಹೋಗುವ ಚಿತ್ರಗಳು ಆಕರ್ಷಕವಾಗಿದ್ದವು.

ADVERTISEMENT

ಕಾವೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುದ್ದುರಾಜು ಆಹಾರ ಮೇಳ ಮತ್ತು ಮಕ್ಕಳ ಸಂತೆಗೆ ಚಾಲನೆ ನೀಡಿದರು. ಆದಿ ಚುಂಚನಗಿರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಜಯಶ್ರೀ, ಬಿಜಿಎಸ್‌ ಬಾಲ ಜಗತ್‌ ಮುಖ್ಯ ಶಿಕ್ಷಕಿ ರಮ್ಯಶ್ರೀ, ಕಾವೇರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸಲ್ಮಾ ರೂಹಿ, ಸಂಸ್ಥೆಯ ವ್ಯವಸ್ಥಾಪಕ ಬೋರೇಗೌಡ, ಶಿಕ್ಷಕರಾದ ಮಂಜುನಾಥ್, ಶಿಲ್ಪಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.