ADVERTISEMENT

ಮದ್ದೂರು| ಫುಟ್‌ಪಾತ್‌ ಒತ್ತುವರಿ ತೆರವು: ಪೊಲೀಸರಿಂದ ಬಂದೋಬಸ್ತ್‌

ಅಧಿಕಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:49 IST
Last Updated 9 ಜನವರಿ 2026, 5:49 IST
ಮದ್ದೂರು ನಗರದ ಪೇಟೆ ಬೀದಿಯಲ್ಲಿ ನಗರಸಭೆ ವತಿಯಿಂದ ಗುರುವಾರ ಫುಟ್‌ಪಾತ್‌ ತೆರವು ಕಾರ್ಯಾಚರಣೆ ನಡೆಯಿತು 
ಮದ್ದೂರು ನಗರದ ಪೇಟೆ ಬೀದಿಯಲ್ಲಿ ನಗರಸಭೆ ವತಿಯಿಂದ ಗುರುವಾರ ಫುಟ್‌ಪಾತ್‌ ತೆರವು ಕಾರ್ಯಾಚರಣೆ ನಡೆಯಿತು    

ಮದ್ದೂರು: ನಗರದಲ್ಲಿ ಪಾದಚಾರಿ ಮಾರ್ಗದ (ಫುಟ್‌ಪಾತ್‌) ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಬುಧವಾರ ಬೆಳಿಗ್ಗೆ ನಗರಸಭೆ ಪೌರಾಯುಕ್ತೆ ರಾಧಿಕಾ ನೇತೃತ್ವದಲ್ಲಿ ನಡೆಯಿತು. 

ನಗರದ ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವರೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಜೆಸಿಬಿಗಳಿಂದ ಪೇಟೆ ಬೀದಿಯಲ್ಲಿನ ಅಂಗಡಿಗಳ ಮುಂದೆ ಹಾಕಿದ್ದ ತಗಡಿನ ಶೀಟ್, ನಾಮ ಫಲಕಗಳನ್ನು ತೆರವುಗೊಳಿಸಲಾಯಿತು.

ಪೌರಾಯುಕ್ತೆ ರಾಧಿಕಾ ಮಾತನಾಡಿ, ‘ನಗರಸಭೆ ವತಿಯಿಂದ ನಿನ್ನೆಯೂ ಧ್ವನಿವರ್ಧಕದ ಮೂಲಕ ತಿಳಿಸಲಾಗಿತ್ತು. ಆದರೆ ಯಾರೂ ಸ್ಪಂದಿಸಿರಲಿಲ್ಲ. ಫುಟ್‌ಪಾತ್‌ ಅತಿಕ್ರಮಣದಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ನಗರಸಭೆಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡೆವು’ ಎಂದು ತಿಳಿಸಿದರು. 

ADVERTISEMENT

‌ಮಾತಿನ ಚಕಮಕಿ:

ಬೆಳ್ಳಂಬೆಳಿಗ್ಗೆ ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆಯೇ ಆತಂಕಗೊಂಡ ವ್ಯಾಪಾರಿಗಳು ನಮಗೆ ಯಾವುದೇ ರೀತಿಯ ನೋಟಿಸ್ ನೀಡದೇ ಏಕಾಏಕಿ ಬಂದು ಫುಟ್‌ಪಾತ್‌ ತೆರವು ಮಾಡುತ್ತಿರುವುದು ಸರಿಯಲ್ಲ. ನಮ್ಮ ಗಮನಕ್ಕೆ ತಂದು ತೆರವು ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

ನಂತರ ಕೊಲ್ಲಿ ವೃತ್ತದಿಂದ ಟಿ.ಬಿ. ವೃತ್ತದವರೆಗಿನ ಸುಮಾರು ಎರಡೂವರೆ ಕಿ.ಮೀ. ದೂರವರಗೆ ಫುಟ್‌ಪಾತ್‌ ಅತಿಕ್ರಮಣವನ್ನು ಜೆಸಿಬಿಗಳ ಮೂಲಕ ಸಂಜೆವರೆಗೆ ತೆರವುಗೊಳಿಸಲಾಯಿತು.

ನಗರಸಭೆ, ಲೋಕೋಪಯೋಗಿ ಅಧಿಕಾರಿಗಳು ಪಾಲ್ಗೊಂಡಿದ್ದರು, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್‌ ಒದಗಿಸಲಾಗಿತ್ತು. 

ಮದ್ದೂರಿನಲ್ಲಿ ಗುರುವಾರ ನಗರದ ಪೇಟೆ ಬೀದಿಯಲ್ಲಿ ಏಕಾಏಕಿ ಫುಟ್‌ಪಾತ್‌ ತೆರವು ಕಾರ್ಯಾಚರಣೆ ಮಾಡುತ್ತಿರುವುದನ್ನು ಖಂಡಿಸಿ ನಗರಸಭೆಯ ಮುಂದೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು

ಬೀದಿಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ 

ಅತ್ತ ನಗರದ ಪೇಟೆಬೀದಿ ಒತ್ತುವರಿ ಕಾರ್ಯಾಚರಣೆ ನಡೆಯುತ್ತಿದ್ದರೆ ಇತ್ತ ನಗರಸಭೆ ಕ್ರಮವನ್ನು ಖಂಡಿಸಿ ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸಿ. ಕುಮಾರಿ ಮಾತನಾಡಿ ‘ನಗರದ ಪೇಟೆ ಬೀದಿಯ ರಸ್ತೆ ವಿಸ್ತರಣೆ ಮಾಡುವುದಾದರೆ ಮಾಡಲಿ. ಅದರೆ ನಗರದ ಪೇಟೆ ಬೀದಿಯಲ್ಲಿ ಸುಮಾರು 275 ಜನ ಬೀದಿಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದು ಇವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ತೆರವುಗೊಳಿಸಿದರೆ ಜೀವನ ನಡೆಸುವುದಕ್ಕೆ ತುಂಬಾ ತೊಂದರೆಯಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿ ನಗರಸಭಾ ಪೌರಾಯುಕ್ತೆ ರಾಧಿಕಾ ಮಾತನಾಡಿ ‘ಬೀದಿಬಿದಿ ವ್ಯಾಪಾರಿಗಳಿಗೆ ಕಾನೂನಿನ ಪ್ರಕಾರ ವ್ಯಾಪಾರ ಮಾಡಲು ಪರ್ಯಾಯ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಗೊಂಡು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಭರವಸೆ ನೀಡಿದರು. ಸಿಐಟಿಯುನ ಪ್ರದೀಪ್ ಚಂದ್ರು ಜಯರಾಮು ಮಕ್ಬಲ್ ಪಾಷ ಶಿವಕುಮಾರ್ ಶಿವಚನ್ನಪ್ಪ ಮಹಾಲಕ್ಷ್ಮಿ ಮಹೇಂದ್ರ ಬೀದಿ ಬದಿ ವ್ಯಾಪಾರಿಗಳಾದ ರೂಪಾ ರಮೇಶ್ ಶಾಂತರಾಜು ಕುಮಾರ ನಾರಾಯಣ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.