ADVERTISEMENT

ಮಂಡ್ಯ: ಫುಟ್‌ಪಾತ್‌ ಒತ್ತುವರಿ ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:02 IST
Last Updated 13 ಜನವರಿ 2026, 4:02 IST
ಮಂಡ್ಯ ನಗರದಲ್ಲಿ ಹೆದ್ದಾರಿಯ ಪಾದಚಾರಿ ಮಾರ್ಗದ ಸ್ಥಳಗಳಲ್ಲಿದ್ದ ನಾಮಫಲಕಗಳನ್ನು ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು 
ಮಂಡ್ಯ ನಗರದಲ್ಲಿ ಹೆದ್ದಾರಿಯ ಪಾದಚಾರಿ ಮಾರ್ಗದ ಸ್ಥಳಗಳಲ್ಲಿದ್ದ ನಾಮಫಲಕಗಳನ್ನು ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು    

ಮಂಡ್ಯ: ನಗರದಲ್ಲಿ ಒತ್ತುವರಿಯಾಗಿದ್ದ ಹೆದ್ದಾರಿಯ ಪಾದಚಾರಿ ಮಾರ್ಗದ ಸ್ಥಳ ತೆರವಿಗೆ ಸೋಮವಾರ ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸ್‌ ಬಂದೋಬಸ್ತ್‌ನಲ್ಲಿ ಒತ್ತುವರಿ ಸ್ಥಳಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದರು. 

ಪಾದಚಾರಿ ಮಾರ್ಗದುದ್ದಕ್ಕೂ ಅಳವಡಿಸಿದ್ದ ಖಾಸಗಿ ಟೆಂಟ್‌ ಶೀಟ್‌ಗಳನ್ನು ತೆರವುಗೊಳಿಸಲಾಯಿತು. ಹೆದ್ದಾರಿಯ ಮಧ್ಯ ಭಾಗದಿಂದ 20 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ, ಏಳು ದಿನಗಳೊಳಗೆ ಸ್ವಯಂಪ್ರೇರಿತವಾಗಿ ತೆರವು ಮಾಡಲು ಅವಕಾಶ ಕಲ್ಪಿಸಲಾಯಿತು. 

ಕೇಂದ್ರ ಸರ್ಕಾರ ನಗರದ ವ್ಯಾಪ್ತಿಯಲ್ಲಿನ ಹೆದ್ದಾರಿಯ ನಿರ್ಮಾಣಕ್ಕೆ ₹11 ಕೋಟಿ ಅನುದಾನ ಬಿಡುಗಡೆ ಮಾಡಿ, ನಗರದ ಹೊರವಲಯದ ಅಮರಾವತಿ ಹೋಟೆಲ್‌ನಿಂದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್‌ವರೆಗೆ ರಸ್ತೆ ನಿರ್ಮಾಣ ಹಾಗೂ ನಗರದ ವ್ಯಾಪ್ತಿಯೊಳಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಈ ಹಿಂದೆ ‌ಸಿದ್ಧತೆ ನಡೆಸಿತ್ತು.

ADVERTISEMENT

ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸದೆ ಕಾಮಗಾರಿ ಮಾಡುವಂತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇವಕರು ಸಂಘಟನೆ, ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿರೋಧಿಸಿದ್ದರು.

ಸಂಘಟನೆಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಡ್ಯ ನಗರಸಭೆ ಜಂಟಿಯಾಗಿ ಮೊದಲಿಗೆ ನಂದಾ ವೃತ್ತದಿಂದ ಮಹಾವೀರ ವೃತ್ತದವರೆಗೆ ಪಾದಚಾರಿ ಮಾರ್ಗದ ಗಡಿ ಗುರುತಿಸಿದೆ.

ನಗರಸಭೆ ಎಂಜಿನಿಯರ್‌ ಮಹೇಶ್, ಆರೋಗ್ಯ ನಿರೀಕ್ಷಕ ಚಲುವರಾಜು, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.

ರಾಜಕೀಯ ಒತ್ತಡಕ್ಕೆ ಮಣಿಯದಿರಲಿ

‘ನಮ್ಮ ಸಂಘಟನೆಗಳ ಹೋರಾಟಕ್ಕೆ ಮಣಿದು ಆರಂಭಿಸಿರುವ ಒತ್ತುವರಿ ತೆರವು ಪೂರ್ಣಗೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕೆಲಸ ಮಾಡಬೇಕು. ಶಾಸಕರು ಅಭಿವೃದ್ದಿ ಪರವಾಗಿರುವುದರಿಂದ ಅವರ ಬೆಂಬಲದೊಂದಿಗೆ ಕಾರ್ಯಚರಣೆ ಮುಂದುವರಿಯಲಿ ನೆಪ ಮಾತ್ರಕ್ಕೆ ತೆರವು ಕಾರ್ಯಾಚರಣೆ ನಡೆದರೆ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಎಚ್ಚರಿಕೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.