
ಮಂಡ್ಯ: ಅರಣ್ಯ ನಾಶ ಮತ್ತು ಒತ್ತುವರಿಗೆ ಸಂಬಂಧಿಸಿ ರಾಜ್ಯದ 31 ಜಿಲ್ಲೆಗಳ ಪ್ರಾದೇಶಿಕ, ಸಾಮಾಜಿಕ ಹಾಗೂ ವನ್ಯಜೀವಿ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎ.ಸಿ.ಎಫ್) ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ (ಆರ್.ಎಫ್.ಒ) ವಿರುದ್ಧ ಲೋಕಾಯುಕ್ತ ಸಂಸ್ಥೆಯು ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 48,281 ಹೆಕ್ಟೇರ್ (1.21 ಲಕ್ಷ ಎಕರೆ) ಅರಣ್ಯ ಪ್ರದೇಶದಲ್ಲಿ 2,341 ಎಕರೆ ಒತ್ತುವರಿಯಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯಲ್ಲಿ ಮೇ ತಿಂಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. ನಂತರ ಇದೇ ರೀತಿ ಎಲ್ಲ ಜಿಲ್ಲೆಗಳಲ್ಲೂ ಒತ್ತುವರಿಯಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿರುವುದರಿಂದ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ನ್ಯೂನತೆಗಳ ಬಗ್ಗೆ ಕೈಗೊಂಡ ಕ್ರಮಗಳ ಪಾಲನಾ ವರದಿಯನ್ನು ಪೂರಕ ದಾಖಲೆಗಳೊಂದಿಗೆ ಡಿಸೆಂಬರ್ ಮೊದಲ ವಾರದೊಳಗೆ ಸಲ್ಲಿಸುವಂತೆ ಉಪಲೋಕಾಯುಕ್ತ–1 ನ್ಯಾಯಮೂರ್ತಿ ಫಣೀಂದ್ರ ಮತ್ತು ಉಪಲೋಕಾಯುಕ್ತ–2 ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
‘ಸಂವಿಧಾನದ ಅನುಚ್ಛೇದ 21ರ ಪ್ರಕಾರ ವನ್ಯಜೀವಿ, ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದ್ದು, ಅವುಗಳನ್ನು ಕೊನೆಗಾಣಿಸಲು ಯಾರಿಗೂ ಅಧಿಕಾರವಿರುವುದಿಲ್ಲ. ಅರಣ್ಯ ಸಂರಕ್ಷಣೆ ರಾಜ್ಯದ ಆದ್ಯ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರತಿ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆಗೆ ಪ್ರಾದೇಶಿಕವಾಗಿ ಕ್ರಮ ಕೈಗೊಳ್ಳುವುದು ಬಹುಮುಖ್ಯ. ಸಸಿ ನೆಡಲು ಹಾಗೂ ಪೋಷಿಸಲು ಬಿಡುಗಡೆಯಾದ ಅನುದಾನದ ಬಗ್ಗೆ ಪರಿಶೀಲಿಸುವ ಅಗತ್ಯವಿದೆ. ಆದ್ದರಿಂದ ಪ್ರಾದೇಶಿಕ, ಸಾಮಾಜಿಕ ಹಾಗೂ ವನ್ಯಜೀವಿ ಅರಣ್ಯ ವಿಭಾಗದವರು ಪ್ರತ್ಯೇಕವಾಗಿ ವರದಿ ನೀಡಬೇಕು’ ಎಂದು ಸೂಚಿಸಲಾಗಿದೆ.
‘ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದಿರುವುದರಿಂದ ಒತ್ತುವರಿ ತೆರವುಗೊಳಿಸಲು ಮತ್ತು ಅರಣ್ಯ ನಾಶ ತಡೆಗಟ್ಟಲು ತೊಡಕಾಗುತ್ತಿದೆ. ನೇಮಕಾತಿಗೆ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ರೆಸಾರ್ಟ್‌ಗಳು ಅವ್ಯಾಹತವಾಗಿ ನಡೆಯಲು ಜನಪ್ರತಿನಿಧಿಗಳ ಕುಮ್ಮಕ್ಕೂ ಇದೆ. ಅರಣ್ಯ ಸಂಪತ್ತು ದೋಚುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ, ಪರಿಸರ ಪ್ರೇಮಿಗಳಾದ ಶ್ರೀರಂಗಪಟ್ಟಣದ ರಮೇಶ್, ಅರವಿಂದ್ ಪ್ರಭು ಒತ್ತಾಯಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬೇಕುಹರವು ದೇವೇಗೌಡ ಪರಿಸರ ಪ್ರೇಮಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.