ADVERTISEMENT

₹ 60 ಲಕ್ಷ ವೆಚ್ಚ | ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ ಮಾಜಿ ಸಚಿವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 23:55 IST
Last Updated 1 ಡಿಸೆಂಬರ್ 2023, 23:55 IST
ಪಾಂಡವಪುರ ಪಾಂಡವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ‘ಸುವರ್ಣ ಕರ್ನಾಟಕ–50 ಮತ್ತು ‘ಸಿ.ಎಸ್.ಪುಟ್ಟರಾಜು–60’ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಜನರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು ಕೂಡ ಇದ್ದರು
ಪಾಂಡವಪುರ ಪಾಂಡವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ‘ಸುವರ್ಣ ಕರ್ನಾಟಕ–50 ಮತ್ತು ‘ಸಿ.ಎಸ್.ಪುಟ್ಟರಾಜು–60’ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಜನರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು ಕೂಡ ಇದ್ದರು   

ಪಾಂಡವಪುರ: ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಈ ಬಾರಿ ತೀವ್ರ ಬರಗಾಲವಿದ್ದರೂ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ‘ಸುವರ್ಣ ಕರ್ನಾಟಕ–50’ ಕಾರ್ಯಕ್ರಮದಲ್ಲೇ ‘ಸಿ.ಎಸ್.ಪುಟ್ಟರಾಜು–60’ ಸಂಭ್ರಮಾಚರಣೆಯೂ ನಡೆಯಿತು.

ಕಿರುನಾಟಕ– ರಸಸಂಜೆ: ಸಿ.ಎಸ್.ಪುಟ್ಟರಾಜು ಅವರ ಜೀವನ ಆಧಾರಿತ ನಾಟಕವನ್ನು ಡ್ರಾಮಾ ಜೂನಿಯರ್ ಮಕ್ಕಳು ಪ್ರದರ್ಶಿಸಿದರು. ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಅವರ ತಂಡದಿಂದ ಸಂಗೀತ ರಸೆ ಸಂಜೆ ಕಾರ್ಯಕ್ರಮ ನಡೆಯಿತು. ಕಿರುತೆರೆ ನಟಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಪಾಂಡವ ಕ್ರೀಡಾಂಗಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧ ರೀತಿಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

ADVERTISEMENT

₹60 ಲಕ್ಷಕ್ಕೂ ಅಧಿಕ ಹಣ ವೆಚ್ಚ: ‘ಸಂಭ್ರಮಾಚರಣೆಗೆ ಸುಮಾರು ₹60 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿತ್ತು’ ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕರ್ತರ ಒತ್ತಾಯಕ್ಕೆ ಮಣಿದೆ: ‘ಸಮರ್ಪಕ ಮಳೆ ಬೀಳದೆ, ಕೆಆರ್‌ಎಸ್ ಜಲಾಶಯ ಭರ್ತಿಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಂಭ್ರಮಾಚರಣೆ ಮಾಡಿಕೊಳ್ಳುವುದು ಸರಿಯಲ್ಲ. ಆದರೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸಂಭ್ರಮಾಚರಣೆಗೆ ಒಪ್ಪಿಗೆ ನೀಡಿ, ಭಾಗವಹಿಸಿದ್ದೇನೆ’ ಎಂದು ಸಿ.ಎಸ್.ಪುಟ್ಟರಾಜು ಹೇಳಿದರು.

‘ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮಕ್ಕೆ ನನ್ನ ಒಪ್ಪಿಗೆ ಇದ್ದಿದ್ದರೆ ಜೆಡಿಎಸ್‌ನ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸುತ್ತಿದ್ದರು. ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗಿರುವ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ’ ಎಂದರು.

ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮುಖಂಡರಾದ ಬಿ.ಆರ್.ರಾಮಚಂದ್ರು, ರಘುನಂದನ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎ.ಮಲ್ಲೇಶ್, ‌ನಾಗಮ್ಮ ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.