ADVERTISEMENT

ರಾಜ್ಯದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸಿಗದ ‘ಗೌರವಧನ’: ಬಾಕಿ ಎಷ್ಟು?

₹4.85 ಕೋಟಿ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ

ಸಿದ್ದು ಆರ್.ಜಿ.ಹಳ್ಳಿ
Published 17 ಆಗಸ್ಟ್ 2025, 20:23 IST
Last Updated 17 ಆಗಸ್ಟ್ 2025, 20:23 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ‘ಮಾಸಿಕ ಗೌರವಧನ’ ಮತ್ತು ಅವರ ಕುಟುಂಬಸ್ಥರಿಗೆ ನೀಡುವ ‘ಮಾಸಾಶನ’ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ ಎಂಬ ದೂರುಗಳಿದ್ದು, ₹4.85 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. 

ಚಾಮರಾಜನಗರ, ಹಾಸನ, ಉಡುಪಿ, ಯಾದಗಿರಿ ಹೊರತುಪಡಿಸಿ, 27 ಜಿಲ್ಲೆಗಳ ಹೋರಾಟಗಾರರ ಕುಟುಂಬಸ್ಥರಿಗೆ ಹಲವು ತಿಂಗಳ ಗೌರವಧನ ಪಾವತಿಯಾಗಿಲ್ಲ. ಬೆಳಗಾವಿ (₹83.34 ಲಕ್ಷ), ಧಾರವಾಡ (₹76.33 ಲಕ್ಷ) ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ (₹59.02 ಲಕ್ಷ) ಅತಿ ಹೆಚ್ಚು ಬಾಕಿ ಇದೆ.

‘ಪ್ರಮಾಣಪತ್ರ’ದ ಕಿರಿಕಿರಿ:

ADVERTISEMENT

‘ಹೋರಾಟಗಾರ ಬದುಕಿದ್ದಾರೆ ಎಂದು ಪ್ರತಿ ವರ್ಷ ಕುಟುಂಬಸ್ಥರು ‘ಜೀವಂತ ಪ್ರಮಾಣಪತ್ರ’ ನೀಡಬೇಕು. ಅಫಿಡವಿಟ್‌ ಮಾಡಿಸಿ, ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರ ಸಹಿ ಪಡೆದು, ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕು. ತಡವಾದರೆ, 3–4 ತಿಂಗಳು ಗೌರವಧನವೇ ಸಿಗುವುದಿಲ್ಲ. ದೇಶಸೇವೆ ಮಾಡಿದವರ ಕುಟುಂಬಸ್ಥರನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ’ ಎಂದು ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದ ಹೋರಾಟಗಾರ ಚನ್ನೇಗೌಡರ ಪುತ್ರ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

2 ತಿಂಗಳಿಂದ ಹಣ ಬಂದಿಲ್ಲ:

‘ತಂದೆ ಚಂದು ಕೆ.ಟಿ. (97) ಅವರಿಗೆ ಎರಡು ತಿಂಗಳಿಂದ ಗೌರವಧನ ಬಂದಿಲ್ಲ. ಕಡೇ ಅವಧಿಯಲ್ಲಿ ‘ಜೀವಂತ ಪ್ರಮಾಣಪತ್ರ’ ಸಲ್ಲಿಸಿ ಎನ್ನುತ್ತಾರೆ. ಮಾಡಿಸುವ ವೇಳೆಗೆ ಅವಧಿ ಮೀರಿರುತ್ತದೆ. ಇದನ್ನು ತಪ್ಪಿಸಿ, ಗ್ರಾಮ ಆಡಳಿತ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಪ್ರಮಾಣಪತ್ರ ನೀಡುವ ಕ್ರಮ ಜಾರಿಗೊಳಿಸಬೇಕು’ ಎಂದು ಮದ್ದೂರಿನ ಅಪೂರ್ವಚಂದ್ರ ಹೇಳಿದರು.   

ಈಗಾಗಲೇ ನಾವು ಬಿಲ್‌ ಸಲ್ಲಿಸಿದ್ದೇವೆ. ತಾಂತ್ರಿಕ ಕಾರಣದಿಂದ ಹಣ ಬಿಡುಗಡೆ ವಿಳಂಬವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಹಣ ಪಾವತಿಸಲು ಕ್ರಮವಹಿಸಲಾಗುವುದು ಕುಮಾರ ಜಿಲ್ಲಾಧಿಕಾರಿ ಮಂಡ್ಯ

‘ರಾಜ್ಯದಲ್ಲಿದ್ದಾರೆ 150 ಸ್ವಾತಂತ್ರ್ಯ ಹೋರಾಟಗಾರರು’ ರಾಜ್ಯದಲ್ಲಿ 150 ಸ್ವಾತಂತ್ರ್ಯ ‌ಹೋರಾಟಗಾರರಿದ್ದಾರೆ. ಸರ್ಕಾರ ಮಾಸಿಕ ₹10 ಸಾವಿರ ಗೌರವಧನ ನಿಗದಿಪಡಿಸಿದೆ. ಹೋರಾಟಗಾರ ಮೃತಪಟ್ಟರೆ ಪತ್ನಿಗೆ ‘ಮಾಸಾಶನ’ ಸಿಗಲಿದೆ. ಅಂತ್ಯಕ್ರಿಯೆಗೆ ಸರ್ಕಾರ ₹4 ಸಾವಿರ ನೀಡುತ್ತದೆ. ಹೋರಾಟಗಾರರಲ್ಲಿ ಮೂವರು ಮಹಿಳೆಯರಿದ್ದಾರೆ. ಅವರೆಂದರೆ – ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗುಳಿಗುಡ್ಡಿ ಓಣಿಯ ಕಾಶವ್ವ ತಿಪ್ಪಣ್ಣ ಕಡೆಣ್ಣವರ್‌ ಶಿವಮೊಗ್ಗ ಜಿಲ್ಲೆಯ ತಿಲಕ್‌ ನಗರದ ವಿಶಾಲಾಕ್ಷಿ ಟಿ.ಎಸ್‌. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಲೀಲಾಬಾಯಿ ಫಕೀರಪ್ಪ ಇಂಗಳಗಿ  

ಗೌರವಧನ’ ಬಾಕಿ; ಟಾಪ್‌ 10 ಜಿಲ್ಲೆಗಳ ವಿವರ  ಜಿಲ್ಲೆ;ಬಾಕಿ ಮೊತ್ತ (₹ಲಕ್ಷಗಳಲ್ಲಿ) ಬೆಳಗಾವಿ;83.34 ಧಾರವಾಡ;76.33 ಬೆಂಗಳೂರು ನಗರ;59.02 ಶಿವಮೊಗ್ಗ;39.30 ತುಮಕೂರು;36.40 ಹಾವೇರಿ;29.99 ಮಂಡ್ಯ;19.70 ಚಿತ್ರದುರ್ಗ;18.14 ಬೀದರ್‌;17.17 ಉತ್ತರಕನ್ನಡ;17.12    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.