ಮಂಡ್ಯ: ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು. ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಆಚರಿಸೋಣ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮರಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ತಾಲ್ಲೂಕು ಕಚೇರಿಗಳಲ್ಲಿ ತೆರೆಯಲಾಗುವ ಏಕಗವಾಕ್ಷಿ ಕೇಂದ್ರದಲ್ಲಿ ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಅನುಮತಿ ಪಡೆಯುವ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ಅವಧಿ, ವಿಸರ್ಜನೆ ಮಾಡುವ ದಿನಾಂಕ ಮತ್ತು ಸ್ಥಳ, ಮೆರವಣಿಗೆಯ ರೂಟ್ ಮ್ಯಾಪ್‌ಗಳನ್ನು ನಮೂದಿಸಬೇಕು. ಇದರಿಂದ ಪೊಲೀಸ್ ಬಂದೋಬಸ್ತ್, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಬ್ಯಾರಿಕ್ಯಾಡ್, ಸೆಸ್ಕ್ ಹಾಗೂ ಅಗ್ನಿ ಶಾಮಕ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಸ್ಥಳೀಯ ಮುಖಂಡರು ಒಂದೇ ಸ್ಥಳವನ್ನು ನಿಗದಿಪಡಿಸಿಕೊಂಡು ಗಣಪತಿ ವಿಸರ್ಜನೆ ಮಾಡಿದರೆ, ಜಿಲ್ಲಾಡಳಿತದಿಂದ ಬೇಕಿರುವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸುಲಭ ಎಂದರು.
ಸಭೆಯಲ್ಲಿ ಹಾಜರಿದ್ದ ಮುಖಂಡರು ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಪಾಲ್ಗೊಂಡಿದ್ದರು.
ಕಿಡಿಗೇಡಿಗಳ ಬಗ್ಗೆ ನಿಗಾ: ಎಸ್ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ‘ಸೆ.5ರಂದು ಈದ್ ಮಿಲಾದ್ ಹಬ್ಬ ಇರುವುದರಿಂದ ಅಂದು ಗಣಪತಿ ವಿಸರ್ಜನೆ ಮಾಡುವುದು ಬೇಡ. 9ನೇ ಹಾಗೂ 11ನೇ ದಿನಕ್ಕೆ ವಿಸರ್ಜನೆ ಮಾಡುವುದು ಉತ್ತಮ. ಗಣಪತಿ ಹಬ್ಬದ ದಿನದಂದೇ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಅದರ ಬದಲಾಗಿ ಬೇರೆ ದಿನ ಪ್ರತಿಷ್ಠಾಪಿಸುವುದು ಬೇಡ’ ಎಂದರು. ‘ಕೋಮು ಗಲಭೆಗೆ ಕಾರಣರಾಗುವ ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸ್ಥಳೀಯರಿಗೆ ಕಿಡಿಗೇಡಿಗಳು ಹಾಗೂ ಸಂದೇಹಾತ್ಮಕ ಘಟನೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೂ ಪೊಲೀಸರು ನಿಗಾ ವಹಿಸುತ್ತಾರೆ. ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಸಿದರು.
‘ಪರಿಸರಸ್ನೇಹಿ ಹಬ್ಬ ಆಚರಿಸೋಣ': ನಂದಿನಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್. ಮಾತನಾಡಿ ‘ಪರಿಸರ ಮಾಲಿನ್ಯ ಉಂಟು ಮಾಡದಂತೆ ಗಣಪತಿ ಹಬ್ಬ ಆಚರಿಸೋಣ. ಈ ಬಾರಿ ಪುಟ್ಟದಾದ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪಿಸಿ. ಪಿಒಪಿ ಗಣಪತಿಯನ್ನು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರೆ ಜಲಮಾಲಿನ್ಯವಾಗುತ್ತದೆ’ ಎಂದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ತಾಲ್ಲೂಕು ಮಟ್ಟದಲ್ಲಿ ಜೇಡಿ ಮಣ್ಣಿನಿಂದ ಗಣಪತಿ ತಯಾರಿಸಲು ಮಕ್ಕಳಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಮಕ್ಕಳು ಪ್ರತಿ ಬೀದಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವುದು ಸಾಮಾನ್ಯ. ಮಕ್ಕಳು ತರಬೇತಿಯಲ್ಲಿ ಹಾಜರಾಗಿ ಅವರೇ ತಯಾರಿಸಿದ ಮೂರ್ತಿ ಪ್ರತಿಷ್ಠಾಪಿಸಲಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.