ADVERTISEMENT

ಗಣಪತಿ ಪ್ರತಿಷ್ಠಾಪನೆ | ಅನುಮತಿ ಕಡ್ಡಾಯ: ಮಂಡ್ಯ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:11 IST
Last Updated 22 ಆಗಸ್ಟ್ 2025, 3:11 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕುಮಾರ ಅವರು ವಿಡಿಯೊ ಸಂವಾದ ನಡೆಸಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕುಮಾರ ಅವರು ವಿಡಿಯೊ ಸಂವಾದ ನಡೆಸಿದರು   

ಮಂಡ್ಯ: ಜಿಲ್ಲೆಯ ತಹಶೀಲ್ದಾರ್‌ ಕಚೇರಿಯಲ್ಲಿ ಗಣಪತಿ ಪ್ರತಿಷ್ಠಾಪಿಸಲು ತೆರೆದಿರುವ ಏಕಗವಾಕ್ಷಿ ಕೇಂದ್ರದಲ್ಲಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು.

ಗಣಪತಿ ಪ್ರತಿಷ್ಠಾಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು, ಸಂಘ– ಸಂಸ್ಥೆಗಳು ಹಾಗೂ ಸಾರ್ವಜನಿಕರು ಏಕಗವಾಕ್ಷಿ ಕೇಂದ್ರದಲ್ಲಿ ನೀಡುವ ಅರ್ಜಿ ಭರ್ತಿ ಮಾಡಿ ಅನುಮತಿ ಪಡೆದುಕೊಳ್ಳಬೇಕು. ಏಕಗವಾಕ್ಷಿ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಸೆಸ್ಕ್‌, ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಇರುತ್ತಾರೆ. ಅರ್ಜಿ ಪರಿಶೀಲಿಸಿದ ನಂತರ 24 ಗಂಟೆಯೊಳಗಾಗಿ ವಿಲೇವಾರಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಾರ್ವಜನಿಕರು ಅಲೆಯುವಂತೆ ಮಾಡಬಾರದು ಎಂದರು.

ADVERTISEMENT

ಗಣಪತಿಯ ಮೆರವಣಿಗೆ, ಭಾಗವಹಿಸುವ ಭಕ್ತರ ಸಂಖ್ಯೆ, ವಿಸರ್ಜನೆ ಮಾಡುವ ಸ್ಥಳದ ಬಗ್ಗೆ ಪರಿಶೀಲಿಸಿ ಅನುಮತಿ ನೀಡಬೇಕು. ಪ್ರತಿ ದಿನ ಅನುಮತಿ ನೀಡಿದ ವಿವರಗಳು, ಹೆಚ್ಚಿನ ನಿಗಾ ವಹಿಸಬೇಕಿರುವ ಸ್ಥಳಗಳ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.

ಹೋಬಳಿ ಹಾಗೂ ನಗರ ಮಟ್ಟದಲ್ಲಿ ಗಣಪತಿ ವಿಸರ್ಜನೆ ಮಾಡಲು ಸೂಕ್ತ ಎರಡು ಅಥವಾ ಮೂರು ಸ್ಥಳಗಳನ್ನು ಗುರುತಿಸಿ, ಸದರಿ ಸ್ಥಳಗಳಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪ, ಬ್ಯಾರಿಕೇಡ್‌, ನುರಿತ ಈಜುಗಾರರನ್ನು ನಿಯೋಜಿಸುವ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಿ ಎಂದು ಸೂಚನೆ ನೀಡಿದರು.

ಟ್ಯಾಂಕರ್‌ ವ್ಯವಸ್ಥೆ:

ನಗರ ಸ್ಥಳೀಯ ಸಂಸ್ಥೆಗಳಿಂದ ಗಣಪತಿ ವಿಸರ್ಜನೆಗೆ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿ, ಮಾರ್ಗದ ಬಗ್ಗೆ ಪ್ರಚಾರ ಕೈಗೊಳ್ಳಿ. ಇದರಿಂದ ಬಹಳಷ್ಟು ಜನ ಟ್ಯಾಂಕರ್‌ನಲ್ಲಿ ಗಣಪತಿ ವಿಸರ್ಜನೆ ಮಾಡುತ್ತಾರೆ. ಪಿಒಪಿ ಗಣಪತಿ ಮೂರ್ತಿಗಳನ್ನು ಹೈಕೋರ್ಟ್‌ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶದಂತೆ ಜಿಲ್ಲೆಯಲ್ಲಿ ಮಾರಾಟ ಹಾಗೂ ಪ್ರತಿಷ್ಠಾಪನೆ ಮಾಡುವುದು ನಿಷೇಧಿಸಲಾಗಿದೆ. ಇದನ್ನೂ ಮೀರಿ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್‌ಗಳಾದ ವಿಶ್ವನಾಥ್, ಪರಶುರಾಮ್ ಸತ್ತಿಗೇರಿ, ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್ ಭಾಗವಹಿಸಿದ್ದರು.

ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ದೊಡ್ಡ ಮಟ್ಟದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದವರು ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸಬೇಕು
–ಬಿ.ಸಿ. ಶಿವಾನಂದಮೂರ್ತಿ ಹೆಚ್ಚುವರಿ ಜಿಲ್ಲಾಧಿಕಾರಿ
‘ಸಿಸಿಟಿವಿ ಕ್ಯಾಮೆರಾ ಅಳವಡಿಸಿ’
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಈಗಾಗಲೇ ನಾಗಮಂಗಲ ನಗರ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು ಸದರಿ ಸ್ಥಳದಲ್ಲಿ ದುರಸ್ತಿಯಾಗಿರುವ ಸಿಸಿಟಿವಿ ಕ್ಯಾಮೆರಾವನ್ನು ನಗರ ಸ್ಥಳೀಯ ಸಂಸ್ಥೆ ಅವರು ಕೂಡಲೇ ಸರಿಪಡಿಸಬೇಕು. ಈ ಬಾರಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಅನುಮತಿ ಪಡೆಯುವ ಗಣಪತಿಗಳ ಪ್ರತಿಷ್ಠಾಪನೆಗಳಿಗೆ ಸಂಖ್ಯೆ ನೀಡಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.