ADVERTISEMENT

ಆದಿಚುಂಚನಗಿರಿ ಮಠ: ಗಂಗಾಧರೇಶ್ವರ ರಥೋತ್ಸವ ಸಂಪನ್ನ

ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 7:30 IST
Last Updated 8 ಮಾರ್ಚ್ 2023, 7:30 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳ ವಾರ ಬೆಳಗಿನ ಜಾವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಗಂಗಾಧರೇಶ್ವರ ಮಹಾ ರಥೋತ್ಸವ ಸಂಪನ್ನಗೊಂಡಿತು.

ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡಪಲ್ಲಕ್ಕಿಯಲ್ಲಿ ಬಂದು ಪೂಜೆ ಸಲ್ಲಿಸಿದ ನಂತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬ್ರಾಹ್ಮಿ ಮುಹೂರ್ತದಲ್ಲಿ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಉತ್ಸವವು ರಥದ ಬೀದಿಯಲ್ಲಿ ಮುಂದೆ ಸಾಗುತ್ತಿದ್ದಂತೆ, ಭಕ್ತರು ಗಂಗಾಧರೇಶ್ವರ ಸ್ವಾಮಿ ರಥವನ್ನು ರಥದ ಬೀದಿಯಲ್ಲಿ ಎಳೆಯುತ್ತಾ ಮುಂದೆ ಸಾಗಿದರು.

ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಬಾಳೆಹಣ್ಣು ಮತ್ತು ಜವನ ವನ್ನು ರಥಕ್ಕೆ ಅರ್ಪಿಸಿ ಹರಕೆ ಸಲ್ಲಿಸಿದರು. ಮಹಾರಥದಲ್ಲಿ ಮೆರವಣಿಗೆ ಹೊರಟಿದ್ದ ಗಂಗಾಧರೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕಂಡ ಭಕ್ತರು ಕೈ ಮುಗಿದರು.

ADVERTISEMENT

ಸೋಮವಾರ ರಾತ್ರಿ ಜರುಗಿದ ಸರ್ವಧರ್ಮ ಸಮ್ಮೇಳನದ ನಂತರ ಬೆಟ್ಟಕ್ಕೆ ಹತ್ತುವ ಮಹಾದ್ವಾರದಲ್ಲಿ ಗಂಧದಕಡ್ಡಿ, ಧೂಪ ಮತ್ತು ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದ ಭಕ್ತರು ರಾತ್ರಿಯೇ ಬೆಟ್ಟವನ್ನೇರಿ ಕ್ಷೇತ್ರದ ವಿಹಂಗಮ ನೋಟ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಬೆಟ್ಟವನ್ನು ಕಣ್ತುಂಬಿಕೊಂಡರು. ರಥೋತ್ಸವದಲ್ಲಿ ಆಯೋಜಿಸಿದ್ದ ಸಿಡಿಮದ್ದು ಪ್ರದರ್ಶನವು ನೋಡುಗರ ಗಮನ ಸೆಳೆಯಿತು.

ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ಸೋಮವಾರ ರಾತ್ರಿ ತೆಪ್ಪೋತ್ಸವ ಸಂಭ್ರಮದಿಂದ ಜರುಗಿತು. ಪುಷ್ಕರಣಿ ಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ತೆಪ್ಪದಲ್ಲಿ ದಸರೀಘಟ್ಟ ಚೌಡೇಶ್ವರಿ ಉತ್ಸವ ಮೂರ್ತಿ ಮತ್ತು ಭೈರವೈಕ್ಯಶ್ರೀ ಪುತ್ಥಳಿಯನ್ನು ಕೂರಿಸಲಾಗಿತ್ತು. ನಂತರ ನಿರ್ಮಲಾನಂದನಾಥ ಸ್ವಾಮೀಜಿ ತೆಪ್ಪದಲ್ಲಿ ವೀರಾಜಮಾನರಾಗಿ ಪುಷ್ಕರಣಿ ಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ಭಕ್ತರಿಗಾಗಿ 10 ಕಡೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಸೋಮವಾರ ರಾತ್ರಿ ಕ್ಷೇತ್ರದ ನಾಲ್ಕು ಕಡೆಗಳಲ್ಲಿ ಪೌರಾಣಿಕ ನಾಟಕ, ಭರತನಾಟ್ಯ ಮತ್ತು ಮ್ಯಾಜಿಕ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕೃಷಿ ಮೇಳವನ್ನೂ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.