ಸಂತೇಬಾಚಹಳ್ಳಿ ಹೋಬಳಿಯ ಶ್ಯಾರಹಳ್ಳಿ ಗ್ರಾಮದ ಮರೀಗೌಡರ ಜಮೀನಿನಲ್ಲಿ ಬೆಳೆದಿರುವ ಶುಂಠಿ ಬೆಳೆಯು ರೋಗಕ್ಕೆ ತುತ್ತಾಗಿರುವುದು
ಸಂತೇಬಾಚಹಳ್ಳಿ: ಕೆ.ಆರ್. ಪೇಟೆ ತಾಲ್ಲೂಕಿನಾದ್ಯಂತ ಕೃಷಿಯನ್ನೇ ಅವಲಂಬಿಸಿ, ಶುಂಠಿ ಬೆಳೆದು ಜೀವನ ನಡೆಸುತ್ತಿದ್ದವರಿಗೆ ಸಮಸ್ಯೆ ಎದುರಾಗಿದೆ. ಈ ಬಾರಿ ಮುಂಗಾರು ಮಳೆಯಿಂದ ಬೆಳೆಗೆ ಶೀತ ಹೆಚ್ಚಾಗಿದ್ದು, ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲೂ ಶುಂಠಿ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ. ಶುಂಠಿ ಬೆಳೆ ಆರ್ಥಿಕವಾಗಿ ಸಬಲೀಕರಣ ಮಾಡುವ ಬೆಳೆಯಾಗಿದೆ. 10 ವರ್ಷಗಳ ಈಚೆಗೆ ಪರಿಚಯವಾದ ಶುಂಠಿ ಬೆಳೆ ಈ ವರ್ಷ ರೈತರಿಗೆ ಮಾರಕವಾಗಿ ಪರಿಣಮಿಸಿದೆ.
ಜೂನ್ ತಿಂಗಳಿನಿಂದ ಪ್ರಾರಂಭವಾದ ಮುಂಗಾರು ಮಳೆ ಎಡೆಬಿಡದೆ ಸುರಿಯುತ್ತಿದೆ. ಇದು ಶುಂಠಿ ಬೆಳೆಗಾರರಿಗೆ ನಷ್ಟದ ಕಹಿ ಉಣಿಸುತ್ತಿದೆ. ಭಾರಿ ಮಳೆಯಾಗಿದ್ದರಿಂದ ಕೊಳೆ ರೋಗ, ಬೆಂಕಿ ರೋಗ, ಎಲೆ ಚುಕ್ಕಿ ರೋಗ ಸೇರಿ ಇನ್ನಿತರ ರೋಗಗಳು ಶುಂಠಿಯನ್ನು ಆವರಿಸಿವೆ.
‘ರೈತರು ಔಷಧ ತಂದು ಸಿಂಪಡಣೆ ಮಾಡುತ್ತಿದ್ದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇವಲ ಮೂರೇ ದಿನಕ್ಕೆ ಹಳದಿ ಬಣ್ಣಕ್ಕೆ ತಿರುಗಿ ಕಾಂಡಗಳು ಮುರಿದು ಬೀಳುತ್ತಿವೆ. ರೋಗ ನಿಯಂತ್ರಿಸಲು ರೈತರು ದುಪ್ಪಟ್ಟು ಹಣ ವ್ಯಯ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ವ್ಯವಸಾಯವನ್ನೇ ಅವಲಂಬಿಸಿ, ಶುಂಠಿ ಬೆಳೆದು ಜೀವನ ಸಾಗಿಸಲು ಮುಂದಾಗಿದ್ದ ರೈತರ ಬದುಕು ಮೂರಾಬಟ್ಟೆಯಾಗಿದೆ’ ಎಂದು ಬೆಳೆಗಾರರು ಅಳಲು ತೋಡಿಕೊಂಡರು.
ರೋಗಗಳಿಂದ ಬೇಸತ್ತಿರುವ ರೈತರಿಗೆ ಬೆಲೆ ಕುಸಿತವು ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 60 ಕೆ.ಜಿ ಶುಂಠಿ ಬೆಳೆಯಲು ರೈತರು ಸುಮಾರು ₹1500 ವೆಚ್ಚ ಮಾಡುತ್ತಾರೆ. ಆದರೆ, 60 ಕೆ.ಜಿ ಶುಂಠಿ ಬೆಳೆಗೆ ಮಾರುಕಟ್ಟೆ ಬೆಲೆ ₹1,200 ಸಿಗುತ್ತಿದೆ.
ರೋಗ ನಿರೋಧಕ, ಕಿಟನಾಶಕ ಔಷಧಗಳಿಗೆ, ರಸಗೊಬ್ಬರಗಳಿಗೆ, ಕಾರ್ಮಿಕರ ಕೂಲಿ ಸೇರಿ ಸಾಕಷ್ಟು ಹಣ ವ್ಯಯ ಮಾಡಬೇಕಿದೆ. ಶುಂಠಿ ರೋಗ ಹಾಗೂ ಕುಸಿದ ಶುಂಠಿ ಬೆಲೆಯಿಂದ ರೈತನಿಗೆ ಭಾರಿ ನಷ್ಟವಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶುಂಠಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ, ಸ್ಥಳಕ್ಕೆ ಭೇಟಿ ನೀಡಿ, ಮಣ್ಣು ಪರೀಕ್ಷೆ
ಮಾಡಿ ಭೂಮಿಗೆ ಅವಶ್ಯವಿರುವ ಗೊಬ್ಬರ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ರೈತ ಸಂಘದ ಮುಖಂಡ ನಾಗೇಶ್
ಆಗ್ರಹಿಸಿದ್ದಾರೆ.
ಮಳೆಗೆ ರೋಗ ಸಾಮಾನ್ಯವಾಗಿ ಎಲ್ಲೆಡೆ ಹರಡಿದೆ. ಹತೋಟಿಗೆ ಟುಬಿಕೊನೋಜೋಲ್, ಟ್ರಿಫ್ಲೋಕ್ಸಿಟ್ರೊಬಿನ್, ಕಾಪರ್ ಹೈಡ್ರೋಕ್ಸಿಡ್, ಮ್ಯಾಂಕೋಜಿಬ್ ಉಪಯೋಗಿಸಿದರೆ ರೋಗ ಹತೋಟಿಗೆ ತರಬಹುದು ಎಂದು ವಿ.ಸಿ. ಫಾರಂ ಪ್ರಾಧ್ಯಾಪಕ ಹಾಗೂ ಸಸ್ಯ ರೋಗ ತಜ್ಞ ಸನತ್ ಕುಮಾರ್ ತಿಳಿಸಿದ್ದಾರೆ.
ಒಂದೂವರೆ ಎಕರೆಯಲ್ಲಿ ಶುಂಠಿ ಬೆಳೆದಿದ್ದೇವೆ. ಕಟಾವಿಗೆ ಬರುವ ಸಂದರ್ಭ ಬೆಳೆಯು ಬೆಂಕಿ ರೋಗಕ್ಕೆ ತುತ್ತಾಗಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಔಷಧ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು– ಮರೀಶ Gowda, ಶ್ಯಾರಹಳ್ಳಿ
‘ಬೆಳೆ ಪರದೇಶಕರು, ಕೆ.ಆರ್. ಪೇಟೆ
ಪರಿಶೀಲಿಸಿ ಸೂಕ್ತ ಔಷಧ’ ಒಬ್ಬ ರೈತ ಒಂದು ಬೆಳೆ ಮಾಡಿದರೆ, ಎಲ್ಲ ರೈತರು ಅದೇ ಬೆಳೆಯನ್ನು ಬೆಳೆಯುತ್ತಾರೆ. ಅದು ಬೆಲೆ ಕುಸಿತಕ್ಕೂ ಕಾರಣವಾಗಿದೆ. ರೈತರು ಪರ್ಯಾಯ ಬೆಳೆಗಳ ಕಡೆ ಗಮನಹರಿಸಬೇಕು. ಶುಂಠಿ ಬೆಳೆದಿರುವ ರೈತರು ದೂರವಾಣಿ ಮೂಲಕ ಸಮಸ್ಯೆ ತಿಳಿಸಿದರೆ, ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಾರೆ. ಶುಂಠಿ ಬೆಳೆ ಪರಿಶೀಲಿಸಿ ಸೂಕ್ತ ಔಷಧ ಶಿಫಾರಸು ಮಾಡುತ್ತೇವೆ. ಹೆಚ್ಚಿನ ರೈತರು ನಮ್ಮನ್ನು ಸಂಪರ್ಕಿಸಿದರೆ ತರಬೇತಿ ಸಹ ಆಯೋಜನೆ ಮಾಡುತ್ತೇವೆ.ಎಂ.ಡಿ.ಲೋಕೇಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.