ADVERTISEMENT

ಆತ್ಮಹತ್ಯೆ: ಬಾಲಮಂದಿರದಲ್ಲಿ ಬಾಲಕಿಗೆ ಸಿಗದ ಸಾಂತ್ವನ

ಆತ್ಮಹತ್ಯೆಗೆ ಖಿನ್ನತೆ ಕಾರಣ ಎನ್ನುತ್ತಿರುವ ಅಧಿಕಾರಿಗಳು, ಪುನಶ್ಚೇತನ ನೀಡಲು ವಿಫಲರಾದರೇ?

ಎಂ.ಎನ್.ಯೋಗೇಶ್‌
Published 1 ಸೆಪ್ಟೆಂಬರ್ 2021, 19:30 IST
Last Updated 1 ಸೆಪ್ಟೆಂಬರ್ 2021, 19:30 IST
ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ
ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ   

ಮಂಡ್ಯ: ನಗರದ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಪಡೆದಿದ್ದ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಮಂದಿರದಲ್ಲಿ ಸೌಲಭ್ಯ, ಸಾಂತ್ವನ, ಪುನಶ್ಚೇತನದ ಕೊರತೆಯಿಂದಾಗಿಯೇ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಖಿನ್ನತೆ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ತಿಳಿಸಿದ್ದಾರೆ. ಆದರೆ ನೋವಿನಲ್ಲಿದ್ದ ಬಾಲಕಿಯನ್ನು ಸಾಂತ್ವನ, ಪುನಶ್ಚೇತನದ ಮೂಲಕ ಖಿನ್ನತೆಯಿಂದ ಹೊರತರುವ ಸಾಕಷ್ಟು ಅವಕಾಶಗಳಿದ್ದವು. ಬಾಲಮಂದಿರದಲ್ಲಿ ಮಕ್ಕಳ ಸ್ನೇಹಿ ವಾತಾವರಣ ಕಲ್ಪಿಸಿದ್ದರೆ ಬಾಲಕಿ ನೋವು ಮರೆಯುತ್ತಿದ್ದಳು.

ಆದರೆ, ನಗರದ ಬಾಲಕಿಯರ ಬಾಲಮಂದಿರ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು ಮಕ್ಕಳನ್ನು ನಿರ್ವಹಿಸುವ ಸಾಂತ್ವನ ಸಿಬ್ಬಂದಿ (ಕೌನ್ಸೆಲರ್‌) ಇಲ್ಲವಾಗಿದ್ದಾರೆ. ಈ ಕಾರಣದಿಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.

ADVERTISEMENT

‘ಏ.14ರಿಂದಲೂ ಬಾಲಕಿ ಬಾಲಮಂದಿರದಲ್ಲಿ ಇದ್ದಳು. ಬಾಲಕಿಗೆ ಪುನರ್ವಸತಿ, ಪುನಶ್ಚೇತನ, ಸಾಂತ್ವನ ಸೌಲಭ್ಯ ಕಲ್ಪಿಸುವಂತೆ ನ್ಯಾಯಾಲಯ ಕೂಡ ಸೂಚನೆ ನೀಡಿತ್ತು. ಆಕೆಯ ನೋವು ಮರೆಸಿ ಹೊಸ ಬದುಕಿನ ದಾರಿ ತೋರಿಸಲು 4 ತಿಂಗಳ ಅವಕಾಶವಿತ್ತು. ಬಾಲ ನ್ಯಾಯ ಕಾಯ್ದೆಯ ಉದ್ದೇಶ ಕೂಡ ಇದೇ ಆಗಿದೆ. ಆದರೆ ಬಾಲಮಂದಿರದ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ವಕೀಲ ಮಂಜುನಾಥ್‌ ಒತ್ತಾಯಿಸಿದರು.

‘ಮೂರು ವರ್ಷಗಳ ಹಿಂದೆ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಗೆ ಮಾತ್ರೆ ಸಿಕ್ಕಿದ್ದು ಎಲ್ಲಿಂದ ಎನ್ನುವುದೇ ಅನುಮಾನಾಸ್ಪದ. ನಗರದ ಬಾಲಕ ಹಾಗೂ ಬಾಲ ಮಂದಿರಗಳಲ್ಲಿ ಪರಿಣತಿ ಪಡೆದ ಸಿಬ್ಬಂದಿ ಇಲ್ಲ. ಕೌನ್ಸೆಲಿಂಗ್ ನಡೆಸುವವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆದರೆ ಇಲ್ಲಿ ದೂರ ಶಿಕ್ಷಣದಲ್ಲಿ ಅನ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಸಾಂತ್ವನ ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿದ್ದಾರೆ’ ಎಂದು ಎನ್‌ಜಿಒವೊಂದರ ಸಿಬ್ಬಂದಿ ಆರೋಪಿಸಿದರು.

ಸ್ವಂತ ಕಟ್ಟಡ ಇಲ್ಲ: ಮಕ್ಕಳ ಪಾಲನೆ ಹಾಗೂ ಪೋಷಣೆ ಒದಗಿಸಲು ಜಿಲ್ಲೆಯಲ್ಲಿ 24 ಖಾಸಗಿ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿವೆ. ಸರ್ಕಾರದಿಂದ ಬಾಲಕರ ಹಾಗೂ ಬಾಲಕಿಯರ 2 ಬಾಲಮಂದಿರಗಳಿವೆ. ನಗರದಲ್ಲಿರುವ ಎರಡೂ ಬಾಲಮಂದಿರಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಮಕ್ಕಳ ಮನಸ್ಥಿತಿ ಸುಧಾರಣೆ, ಪುನಶ್ಚೇತನ ನೀಡುವಲ್ಲಿ ಸರ್ಕಾರಿ ಬಾಲಮಂದಿರಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವಿದೆ.

‘24 ಖಾಸಗಿ ಸಂಸ್ಥೆಗಳಲ್ಲಿ 12ರಲ್ಲಿ ಮಾತ್ರ ಮಕ್ಕಳಿದ್ದಾರೆ. ಸರ್ಕಾರಿ ಬಾಲಮಂದಿರ ಸೇರಿದಂತೆ ಖಾಸಗಿ ಸಂಸ್ಥೆಗಳು ಮಕ್ಕಳ ಸ್ನೇಹಿಯಾಗಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಬಾಲಮಂದಿರ, ಖಾಸಗಿ ಸಂಸ್ಥೆಗಳಗೆ ಭೇಟಿ ನೀಡಿ ಅವುಗಳ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು’ ಎಂದು ಮಕ್ಕಳ ಸಹಾಯವಾಣಿ ನಿರ್ದೇಶಕ ಮಿಕ್ಕೆರೆ ವೆಂಕಟೇಶ್‌ ಒತ್ತಾಯಿಸಿದರು.

₹ 50 ಸಾವಿರ ಬಾಡಿಗೆ ಏಕೆ?

‘ಬಾಲಕಿಯರ ಹಾಗೂ ಬಾಲಕರ ಬಾಲಮಂದಿರಗಳ ಕಟ್ಟಡಗಳಿಗೆ ತಲಾ ₹ 50 ಸಾವಿರ ಬಾಡಿಗೆ ಪಾವತಿ ಮಾಡಲಾಗುತ್ತಿದೆ. 2–3 ಕೊಠಡಿಗಳ ಮನೆಗೆ ₹ 50 ಸಾವಿರ ಬಾಡಿಗೆ ನೀಡುತ್ತಿರುವುದು ಅನುಮಾನಾಸ್ಪದವಾಗಿದೆ’ ಎಂದು ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರೊಬ್ಬರು ಆರೋಪಿಸಿದರು.

‘ಬಾಲಮಂದಿರಕ್ಕಾಗಿ 5 ವರ್ಷಗಳ ಹಿಂದೆಯೇ ಕೆರೆಯಂಗಳಲ್ಲಿ 1 ಎಕರೆ ಭೂಮಿ ಮಂಜೂರಾಗಿದೆ. ಅಧಿಕಾರಿಗಳು ಸ್ವಂತ ಕಟ್ಟಡ ನಿರ್ಮಿಸಲು ಹಿಂದೇಟು ಹಾಕುತ್ತಿದ್ದು ಬಾಡಿಗೆ ಅವ್ಯವಹಾರದಲ್ಲಿ ಮುಳುಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ’ ಎಂದು ಅವರು ತಿಳಿಸಿದರು.

* ಬಾಲಕಿಯರ ಬಾಲಮಂದಿರಕ್ಕೆ ಮಂಜೂರಾಗಿರುವ ಜಾಗದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಬಾಲಮಂದಿರಗಳಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಲಾಗುವುದು

–ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.