ಕೆ. ಆರ್.ಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು.
ಕೆ. ಆರ್.ಪೇಟೆ: ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಬಗೆಯ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಗ್ರಾಮಾಂತರ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿಗಳ ಮೇಲಿದೆ. ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯ ಜೊತೆಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರೆ ಪಂಚಾಯತ್ ರಾಜ್ ಕನಸು ನನಸಾಗಬಲ್ಲದು. ವಿವಿಧ ಇಲಾಖೆಗಳು ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಅವುಗಳಿಗೆ ಬರುವ ಅನುದಾನ ಸರ್ಕಾರಕ್ಕೆ ಹಿಂತಿರುಗಿ ಹೋಗದಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ತಾಕೀತ ಮಾಡಿದರು.
ಹೆಚ್ಚಾಗಿ ವಾರ್ಡ್ ಸಭೆ ಗ್ರಾಮ ಸಭೆಗಳನ್ನು ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಬಗೆಹರಿಸುವ ಕಾರ್ಯವನ್ನು ನಡೆಸುವಂತೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ರಾಜಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವರದಿಯಾಗಿರುವ 9 ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಈ ತಾಲ್ಲೂಕಿನಲ್ಲಿ ನಡೆದಿದೆ. ಆದ್ದರಿಂದ ಪಿಡಿಒಗಳು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ಬಾಲ್ಯ ವಿವಾಹವಾಗುವುದನ್ನು ತಡೆಗಟ್ಟುವಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ನಡೆಸಬೇಕು. ವಿಷಯ ತಿಳಿದೊಡನೆ ನಿಲ್ಲಿಸುವ ಪ್ರಯತ್ನ ಮಾಡದಿದ್ದರೆ ಸರ್ಕಾರದಿಂದ ದಂಡನೆಗೆ ಒಳಗಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ವಿವಿಧ ಇಲಾಖೆಗಳ ಅನುದಾನದ ಬಳಕೆಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ ಶ್ರೀನಿವಾಸ್, ಲೆಕ್ಕಾಧಿಕಾರಿ ಶಂಕರ್, ಸಹಾಯಕ ನಿರ್ದೇಶಕ ನರಸಿಂಹ ರಾಜು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ನರೇಗಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಪಿಡಿಒ ಮತ್ತು ಅಧಿಕಾರಿಗಳು ಹೆಚ್ಚು ನಿಗವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳು ಕಾಟಾಚಾರದ ಸಭೆಗಳಾಗದಂತೆ ನೋಡಿಕೊಳ್ಳಬೇಕು.– ಎಚ್.ಟಿ.ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.