
ಮೈಷುಗರ್
ಮಂಡ್ಯ: ‘ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಷುಗರ್) ಖಾಸಗೀಕರಣಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ ರೈತ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಸ್ಪಷ್ಟನೆ ನೀಡಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ತನಿಖೆ ಹೆಸರಿನಲ್ಲಿ ಖಾಸಗೀಕರಣದ ಹುನ್ನಾರ ನಡೆಯುತ್ತಿದೆ’ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಆರೋಪಿಸಿದ್ದರು. ಇದು ಸತ್ಯಕ್ಕೆ ದೂರವಾದುದು. ನಮ್ಮ ಸರ್ಕಾರ ಬಂದ ನಂತರ ಮೈಷುಗರ್ ಅಭಿವೃದ್ಧಿಗೆ ₹113 ಕೋಟಿ ಆರ್ಥಿಕ ನೆರವು ನೀಡಿ, ಶಕ್ತಿ ತುಂಬಿದೆ ಎಂದರು.
2026–27ನೇ ಸಾಲಿನ ಹಂಗಾಮಿಗೆ ಈಗಾಗಲೇ ಬಾಯ್ಲಿಂಗ್ ಹೌಸ್, ಬಾಯ್ಲರ್ ದುರಸ್ತಿ, ಕಾಕಂಬಿ ಟ್ಯಾಂಕ್ ನಿರ್ಮಾಣಕ್ಕೆ ಸುಮಾರು ₹74 ಕೋಟಿ ಅಂದಾಜು ಪಟ್ಟಿಯನ್ನು ಸರ್ಕಾರದ ಅನುಮೋದನೆ ಹಂತದಲ್ಲಿದೆ. ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಮರ್ಥವಾಗಿ ಕಾರ್ಖಾನೆ ನಡೆಸಲು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
2 ವರ್ಷಗಳಿಂದ ಮೈಷುಗರ್ ಕಾರ್ಖಾನೆಯನ್ನು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದೇವೆ. ಸ್ವಂತ ಸಾಮರ್ಥ್ಯದಿಂದ ಕೋಜನ್ ಪ್ರಾರಂಭಿಸಿ ₹16 ಕೋಟಿ ಮೊತ್ತದ ವಿದ್ಯುತ್ ಉತ್ಪಾದನೆ ಮಾಡಲಾಗಿದ್ದು, ಈ ಹಿಂದೆ ನನೆಗುದಿಗೆ ಬಿದ್ದಿರುವ ₹270 ಕೋಟಿಯನ್ನು ಮೈಷುಗರ್‌ಗೆ ನೀಡಿ ಆರ್ಥಿಕ ಶಕ್ತಿ ತುಂಬಲಾಗಿದೆ ಎಂದರು.
ತನಿಖೆಗೆ ಸಹಕಾರ
ಮೈಷುಗರ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಾವು ಮತ್ತು ಎಂ.ಡಿ. ತನಿಖೆಯ ಭಾಗವಾಗಿರದೇ ಹೊರಗಿರುತ್ತೇವೆ. ತನಿಖಾ ತಂಡದಲ್ಲಿ ಮೈಷುಗರ್ ವ್ಯಾಪ್ತಿಯ ರೈತ ಪ್ರತಿನಿಧಿ ಇರಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಮುಖಂಡರಾದ ಸುಂಡಹಳ್ಳಿ ಮಂಜುನಾಥ್, ಕೆ.ಎನ್.ನಾಗರಾಜು, ಕಿರಣ್‌ಕುಮಾರ್, ದೀಪಕ್, ಸಿ.ಎಂ. ದ್ಯಾವಪ್ಪ, ಚಂದಗಾಲು ವಿಜಯಕುಮಾರ್ ಹಾಜರಿದ್ದರು.
₹127 ಕೋಟಿ ವಸೂಲಾತಿಗೆ ಕ್ರಮ
ನಾಗರಾಜಪ್ಪ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದಿಂದ ₹127 ಕೋಟಿ ನಷ್ಟವಾಗಿದ್ದು, ಅದರ ವಸೂಲಾತಿಗೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಆದೇಶ ಹೊರಡಿಸಲು ಕಾರ್ಯದರ್ಶಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2026–27ನೇ ಸಾಲಿಗೆ 5.80 ಲಕ್ಷ ಟನ್ ಕಬ್ಬು ರೈತರಿಂದ ಒಪ್ಪಂದವಾಗಿದೆ. ಆರ್.ಬಿ. ಟೆಕ್ ಕಂಪನಿಯನ್ನು ಹೊರಗಿಟ್ಟು, ಟೆಂಡರ್ ಕರೆಯುತ್ತೇವೆ. ಬಾಯ್ಲಿಂಗ್ ಹೌಸ್ ಪುನಃಶ್ಚೇತನವಾದರೆ, ನಿರಂತರವಾಗಿ ಕಬ್ಬು ಅರೆಯಲು ಅನುಕೂಲವಾಗುತ್ತದೆ. ಉತ್ತಮ ಇಳುವರಿಯೂ ಸಿಗಲಿದೆ. ಈ ಮೂಲಕ ನಷ್ಟದಿಂದ ಹೊರಬರಬಹುದು ಎಂದು ಮಾಹಿತಿ ನೀಡಿದರು.