ADVERTISEMENT

ಮಂಡ್ಯ | ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ: ADC ನೇತೃತ್ವದಲ್ಲಿ ತನಿಖಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 15:40 IST
Last Updated 21 ಜನವರಿ 2026, 15:40 IST
   

ಮಂಡ್ಯ: ನಾಗಮಂಗಲ ತಾಲ್ಲೂಕು ಕಚೇರಿಯ ಅಭಿಲೇಖಾಲಯ ಹಾಗೂ ಭೂ ಮಂಜೂರಾತಿ ಶಾಖೆಯ ಕಂದಾಯ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಕ್ರಿಮಿನಲ್‌ ಪ್ರಕರಣದ ಕುರಿತು ಸವಿವಿಸ್ತಾರವಾದ ವರದಿ ಸಲ್ಲಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ತಹಶೀಲ್ದಾರ್‌ ಗ್ರೇಡ್‌–2 ಎಸ್‌.ಸಂತೋಷ್‌, ಪುರಸಭಾ ತಹಶೀಲ್ದಾರ್‌ ರವಿಶಂಕರ್‌ ಸಿ.ಜಿ., ಶಿರಸ್ತೇದಾರ್‌ ಪಿ.ವಸಂತಕುಮಾರ್‌, ಎಫ್‌ಡಿಎ ನರಸಿಂಹಮೂರ್ತಿ ಎಚ್‌. ಸೇರಿದಂತೆ 6 ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಲಾಗಿದೆ. 

ಪ್ರಕರಣದ ವಿವರ:

ADVERTISEMENT

ಬಗರ್‌ ಹುಕುಂ ಸಕ್ರಮೀಕರಣ ಯೋಜನೆಯಡಿ ಅಕ್ರಮವಾಗಿ ಭೂ ಮಂಜೂರಾತಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಮೇರೆಗೆ ಮಂಡ್ಯ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡವು ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಜ.13ರಂದು ಶೋಧ ಕಾರ್ಯ ನಡೆಸಿತ್ತು. 

ಇಬ್ಬರು ಶಿರಸ್ತೇದಾರರು, ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು 10 ಆಪಾದಿತರ ವಿರುದ್ಧ ನಾಗಮಂಗಲ ಟೌನ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಇದುವರೆಗೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.  

ಇಬ್ಬರು ಶಿರಸ್ತೇದಾರರು ಸೇರಿದಂತೆ ಒಟ್ಟು 6 ಸರ್ಕಾರಿ ನೌಕರರರು ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ. ಡಿವೈಎಸ್ಪಿ ಚಲುವರಾಜು ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.