ಶ್ರೀರಂಗಪಟ್ಟಣ: ‘ಸರ್ಕಾರಿ ಶಾಲೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದು ಒಂದೊಂದಾಗಿ ಶಾಲೆಗಳು ಮುಚ್ಚುತ್ತಿವೆ’ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಆರೋಪಿಸಿದರು.
ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದಿರುವ ತಾಲ್ಲೂಕಿನ ಎಂ. ಶೆಟ್ಟಹಳ್ಳಿ ಗ್ರಾಮದ ಮಹೇಶ್ ಅವರ ಮಗ ಜೀವನ್ ಅವರಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕ ವರ್ಗವಿದೆ. ಆದರೆ ಸೂಕ್ತ ಕಟ್ಟಡ, ಶುದ್ಧ ಕುಡಿಯುವ ನೀರು, ಪ್ರಯೋಗಶಾಲೆ, ಶೌಚಾಲಯ, ಕ್ರೀಡಾ ಪರಿಕರಗಳು ಇತರ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.
’ಜಿಲ್ಲೆಯಲ್ಲಿ 10 ವರ್ಷಗಳ ಈಚೆಗೆ 351 ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ತಾಲ್ಲೂಕಿನಲ್ಲಿ 15 ಶಾಲೆಗಳು ಬಂದ್ ಆಗಿವೆ. ಪ್ರಸಕ್ತ ಸಾಲಿನಲ್ಲೂ 3 ಶಾಲೆಗಳು ಮುಚ್ಚಿ ಹೋಗಿವೆ. ಸರ್ಕಾರ ನಿರ್ಲಕ್ಷ್ಯತನ ಮುಂದುವರಿಸಿದರೆ ಇನ್ನು 10 ವರ್ಷಗಳಲ್ಲಿ ಶೇ 50ರಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಸಂಭವವಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಆದ್ಯತೆಯ ವಲಯಗಳೆಂದು ಪರಿಗಣಿಸಿ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು’ ಅವರು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಜಿ.ಪಂ. ಮಾಜಿ ಸದಸ್ಯ ಎಸ್.ಎಲ್. ಲಿಂಗರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಕೆ. ಸಿದ್ದೇಗೌಡ, ಶಾರದಾ ರವಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ, ಮುಖಂಡರಾದ ದರ್ಶನ್ ಲಿಂಗರಾಜು, ಎಂ.ಬಿ. ಇಂದ್ರಕುಮಾರ್, ಎಂ.ಆರ್. ಯತಿರಾಜ್, ಎಸ್.ಕೆ. ಮಂಜುನಾಥ್, ಬಿ.ಸಿ. ಕೃಷ್ಣೇಗೌಡ, ಬೋರೇಗೌಡ, ಕೆಂಪರಾಜು, ತಿಬ್ಬೇಗೌಡ, ದೇವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.