ಶ್ರೀರಂಗಟ್ಟಣ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕುಸಿಯುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣವಾಗಿದೆ.
ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ ಈ ವರ್ಷ 62 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 2024–25ನೇ ಸಾಲಿನಲ್ಲಿ 48, 2023–24ನೇ ಸಾಲಿನಲ್ಲಿ 38, 2022–23ನೇ ಸಾಲಿನಲ್ಲಿ 34 ಹಾಗೂ 2021–22ನೇ ಸಾಲಿನಲ್ಲಿ 28 ವಿದ್ಯಾರ್ಥಿಗಳಿದ್ದರು.
ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಹಾಗೂ ಶಿಕ್ಷಕರ ವೈಯಕ್ತಿಕ ಕಾಳಜಿಯಿಂದಾಗಿ ಶಾಲೆಯ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಶಾಲೆಯಲ್ಲಿ ಸದ್ಯ ಒಂದನೇ ತರಗತಿಯಲ್ಲಿ 9, ಎರಡನೇ ತರಗತಿಯಲ್ಲಿ 7, ಮೂರನೇ ತರಗತಿಯಲ್ಲಿ 7, ನಾಲ್ಕನೇ ತರಗತಿಯಲ್ಲಿ 9, ಐದನೇ ತರತಿಯಲ್ಲಿ 8, ಆರನೇ ತರಗತಿಯಲ್ಲಿ 4 ಹಾಗೂ ಏಳನೇ ತರಗತಿಯಲ್ಲಿ 18 ವಿದ್ಯಾರ್ಥಿಗಳಿದ್ದಾರೆ. ಪಕ್ಕದ ಹನುಮಂತನಗರದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಚಟವಟಿಕೆಗಳಲ್ಲಿ ಕೂಡ ಈ ಶಾಲೆಯ ವಿದ್ಯಾರ್ಥಿಗಳು ಮುಂದಿದ್ದಾರೆ. ಕಬಡ್ಡಿ, ಕೊಕ್ಕೊ, ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ತೋರುತ್ತಿದ್ದಾರೆ.
ಹನುಮಂತನಗರದಿಂದ ನೆಲಮನೆ ಶಾಲೆಗೆ ವಿದ್ಯಾರ್ಥಿಗಳನ್ನು ಕರೆ ತರಲು ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಶಿಕ್ಷಕರು ಹಾಗೂ ಪೋಷಕರು ವಾಹನದ ಬಾಡಿಗೆ ಭರಿಸುತ್ತಿದ್ದಾರೆ.
ಶಾಲೆಯಲ್ಲಿ ಸ್ಮಾರ್ಟ್ ತರಗತಿಗಳು ನಿರಂತರವಾಗಿ ನಡೆಯುತ್ತಿದೆ. ಅದಕ್ಕಾಗಿ ಪ್ರತ್ಯೇಕ ಕೊಠಡಿಯನ್ನೂ ಸಿದ್ಧಪಡಿಸಲಾಗಿದೆ. ಸುಸಜ್ಜಿತ ಗ್ರಂಥಾಲವೂ ಇದೆ. ದಿನಪತ್ರಿಕೆ ಹಾಗೂ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಪುಸ್ತಕಗಳು ಈ ಗ್ರಂಥಾಲಯದಲ್ಲಿವೆ.
‘ನಮ್ಮೂರಿನ ಸರ್ಕಾರಿ ಶಾಲೆ 1905ರಲ್ಲಿ ಪ್ರಾಂಭವಾಗಿದ್ದು, ಶತಮಾನೋತ್ಸವ ಆಚರಿಸಿಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಮುಖ್ಯಶಿಕ್ಷಕ ಕೃಷ್ಣಪ್ಪ ಹಾಗೂ ಸಹ ಶಿಕ್ಷಕರು ಮನೆ ಮನೆ ಸಮೀಕ್ಷೆ ನಡೆಸಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿದ್ದಾರೆ. ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿರುವುದು ಖುಷಿಯ ಸಂಗತಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎನ್.ಸಿ. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನ ಬಲ್ಲೇನಹಳ್ಳಿ, ಚಿನ್ನೇನಹಳ್ಳಿ ಹಾಗೂ ಮೊಳ್ಳೇನಹಳ್ಳಿ ಸರ್ಕಾರಿ ಶಾಲೆಗಳು ಮುಚ್ಚಿವೆ. 10 ವರ್ಷಗಳಲ್ಲಿ 15 ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಹೀಗಿರುವಾಗ ನೆಲಮನೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ನೆಲಮನೆ ಸರ್ಕಾರಿ ಶಾಲೆ ಉದಾಹರಣೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ನಂದೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.