
ಚಿನ್ನಾಭರಣ, ನಗದು ವಶ | ಆರೋಪಿಗಳಿಂದ 19 ಬೈಕ್‌ಗಳು ವಶ | ದೇಗುಲಗಳಲ್ಲಿ ಕಳ್ಳತನ: ಆರು ಆರೋಪಿಗಳ ಬಂಧನ
ಮಂಡ್ಯ: ದೇವಸ್ಥಾನಗಳ ಹುಂಡಿ ಕಳವು, ಮನೆಗಳ್ಳತನ ಮತ್ತು ಬೈಕ್‌ಗಳ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿ, ₹34 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ವಾಹನಗಳನ್ನು ಮಂಡ್ಯ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಳವಳ್ಳಿ ತಾಲ್ಲೂಕಿನ ಸಾಗ್ಯ ಸರಗೂರು ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ ದೇವರ ಮೇಲೆ ಹಾಕಿದ್ದ ಚಿನ್ನಾಭರಣ ಮತ್ತು ಹುಂಡಿಯಲ್ಲಿದ್ದ ನಗದು ದೋಚಿದ್ದ ಆರು ಆರೋಪಿಗಳನ್ನು ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ಬಿ.ಎಸ್. ನೇತೃತ್ವದ ತಂಡ ಬಂಧಿಸಿದೆ ಎಂದರು.
ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ರಾಯಕೋಟೆಯ ವಿಜಯ್ (ಮಾರ್ಕ್ ವಿಜಿ) ಮತ್ತು ಮಣಿ, ಕನಕಪುರ ತಾಲ್ಲೂಕಿನ ಸಾತನೂರು ಕಾಲೊನಿಯ ಮಧುರ, ಮಾಯಪ್ಪನಹಳ್ಳಿಯ ಭರತ್, ರಾಮನಗರದ ಹನುಮಂತನಗರ ನಿವಾಸಿ ನವೀನ್ (ಕಬ್ಬಾಳ), ಮೈಸೂರು ನಗರ ತೊಣಚಿಕೊಪ್ಪಲು ನಿವಾಸಿ ಶಬ್ಬೀರ್ ಬಂಧಿತರು. ಇವರಿಂದ ಒಟ್ಟು ₹7.17 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ ಬಹುತೇಕರು ಪಾತ್ರೆ ಮತ್ತು ಕೂದಲು ವ್ಯಾಪಾರಿಗಳಾಗಿದ್ದಾರೆ. ಜೊತೆಗೆ ಚಾಲಕ ಮತ್ತು ಪ್ಲಂಬರ್‌ಗಳೂ ಇದ್ದಾರೆ. ಈ ಆರೋಪಿಗಳ ವಿರುದ್ಧ ಹಲಗೂರು ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದರು.
ಈ ಎಲ್ಲ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಒಟ್ಟು 24 ಗ್ರಾಂ ತೂಕದ ಚಿನ್ನದ ಒಡೆವೆಗಳು, 245 ಗ್ರಾಂ ಬೆಳ್ಳಿಯ ಒಡವೆಗಳು, ₹5,094 ಹುಂಡಿ ಹಣ, ಎರಡು ಜೊತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, ಐದು ಘಂಟೆಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಬೈಕ್, ಗೂಡ್ಸ್ ಆಟೊ, ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿಗಳ ವಿರುದ್ಧ ಬೆಳಕವಾಡಿ, ಕೆ.ಎಂ.ದೊಡ್ಡಿ, ಮಳವಳ್ಳಿ ಟೌನ್, ಸಾತನೂರು, ಕನಕಪುರ, ತಮಿಳುನಾಡು, ಧರ್ಮಪುರಿ, ಅಂಚೆಹಟ್ಟಿ, ಕೃಷ್ಣಗಿರಿ ಪೊಲೀಸ್ ಠಾಣೆಗಳಲ್ಲಿ ದೇವಸ್ಥಾನ ಕಳವು ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಅಪರಾಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸ್ ವಿಶೇಷ ತಂಡ ಯಶಸ್ವಿಯಾಗಿದೆ. ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದುವಿ.ಜೆ.ಶೋಭಾರಾಣಿ ಎಸ್ಪಿ ಮಂಡ್ಯ
ಮನೆಗಳ್ಳತನ: ಅಪ್ಪ–ಮಗ ಬಂಧನ
ಮಳವಳ್ಳಿ ಪಟ್ಟಣದಲ್ಲಿ ಗಂಗಾಧರ್ ಎಂಬುವರ ಮನೆಯಲ್ಲಿ 2025ರ ಡಿಸೆಂಬರ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಪ್ಪ–ಮಗನನ್ನು ಹಲಗೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀಧರ್ ಬಿ.ಎಸ್. ನೇತೃತ್ವದ ತಂಡ ಬಂಧಿಸಿದೆ. ಮೂಲತಃ ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ಶಿಕಾರಿ ಪಾಳ್ಯದವರಾದ ಬಾಬಾಜಾನ್ (37) ಮತ್ತು ಆತನ ಮಗ (ಕಾನೂನು ಸಂರ್ಘರ್ಷಕ್ಕೆ ಒಳಗಾದ 16 ವರ್ಷದ ಬಾಲಕ) ಬಂಧಿತರು. ಇವರ ವಿರುದ್ಧ ಮಳವಳ್ಳಿ ಹಲಗೂರು ಮತ್ತು ಬನ್ನೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಒಟ್ಟು 144 ಗ್ರಾಂ ಚಿನ್ನ 46 ಗ್ರಾಂ ಬೆಳ್ಳಿಯ ಕಾಲು ಚೈನು ಸೇರಿದಂತೆ ಒಟ್ಟು ₹20 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
19 ಬೈಕ್ ಕಳ್ಳತನ: ಮೂವರ ಬಂಧನ
ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ಕಳವಾಗಿದ್ದ ಬೈಕ್ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 19 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಮೈಸೂರು ತಾಲ್ಲೂಕಿನ ಹುಂಡಿ ಗ್ರಾಮದ ಕಾರ್ತಿಕ್ (23) ಮಳವಳ್ಳಿ ತಾಲ್ಲೂಕಿನ ಬಾಣಸಮುದ್ರದ ಸಾಗರ್ ಎಂ.ಎಸ್. (23) ಮಳವಳ್ಳಿ ಪಟ್ಟಣದ ಪೇಟೆ ಬೀದಿ ನಿವಾಸಿ ಪ್ರಜ್ವಲ್ ಎಂ.ಸಿ. (23) ಬಂಧಿತರು. ಬನ್ನೂರು ಠಾಣೆಯಲ್ಲಿ 10 ಕೊಳ್ಳೇಗಾಲ ಪಟ್ಟಣದಲ್ಲಿ 2 ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ 2 ಕಿರುಗಾವಲು ಠಾಣೆಯಲ್ಲಿ 1 ಮಂಡ್ಯ ಪೂರ್ವ ಠಾಣೆಯಲ್ಲಿ 2 ಮೈಸೂರು ನಗರದಲ್ಲಿ 1 ಮಳವಳ್ಳಿ ಪುರ ಠಾಣೆಯಲ್ಲಿ 1 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 19 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಾಜು ಮೌಲ್ಯ ₹7 ಲಕ್ಷ ಎಂದು ಎಸ್ಪಿ ಶೋಭಾರಾಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.