ADVERTISEMENT

ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಸಿದ್ದರಾಗಿ: ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:06 IST
Last Updated 23 ಜನವರಿ 2026, 6:06 IST
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿದರು 
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿದರು    

ಹಲಗೂರು: ಬೇಸಿಗೆ ಕಾಲ ಸಮೀಪಿಸಿದ್ದು ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಿರುವ ಕುಡಿಯುವ ನೀರಿನ ಸರಬರಾಜು ಮತ್ತು ಸಮರ್ಪಕ ನಿರ್ವಹಣೆಗೆ ಸಿದ್ಧರಾಗಿರಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಸೂಚನೆ ನೀಡಿದರು.

ಇಲ್ಲಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಡರಹಳ್ಳಿ, ನಿಟ್ಟೂರು, ಲಿಂಗಪಟ್ಟಣ, ಎಚ್.ಬಸಾಪುರ, ತೊರೆಕಾಡನಹಳ್ಳಿ ಸೇರಿದಂತೆ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಮತ್ತು ವಾಟರ್ ಮ್ಯಾನ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಅಗತ್ಯವಿರುವ ನೀರಿನ ಬಜೆಟ್ ತಯಾರಿಸಿಕೊಳ್ಳಬೇಕು. ಪ್ರತಿವ್ಯಕ್ತಿಗೂ ಕನಿಷ್ಠ 55 ಎಲ್.ಪಿ.ಸಿ.ಡಿ ನೀರನ್ನು ಸರಬರಾಜು ಮಾಡಲು ಕ್ರಮವಹಿಸಬೇಕು. ಅಗತ್ಯವಿರುವ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದರೇ, ಗ್ರಾಮದ ಸನಿಹದಲ್ಲಿರುವ ಖಾಸಗಿ ವ್ಯಕ್ತಿಗಳ ಒಡೆತನದ ಕೊಳವೆ ಬಾವಿಯಿಂದ ನೀರು ಪಡೆಯಲು ಅಗತ್ಯವಿರುವ ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಕು’ ಎಂದರು.

ADVERTISEMENT

ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಜನರು ಮತ್ತು ಜಾನುವಾರುಗಳಿಗೆ ಅಗತ್ಯವಿರುವ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಿಷ್ಠ 5 ಗ್ರಾಮಗಳಲ್ಲಿ 24/7 ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಆಗಿರುವ ಕಾಮಗಾರಿ ಕೆಲಸ, ಪೈಪ್ ಲೈನ್, ಕೊಳಾಯಿ ಸಂಪರ್ಕ ಕುರಿತ ಲೋಪ ದೋಷಗಳನ್ನು ಗುರುತಿಸಿ ಕೂಡಲೇ ಸರಿಪಡಿಸಲು ಕ್ರಮವಹಿಸಬೇಕು. ಜಾಗ ಮತ್ತಿತರ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಗಮನಹರಿಸಿ ಎಂದು ಎಇಇ ಅವರಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಸ್ವಾಮಿ, ಕಿರಿಯ ಎಂಜಿನಿಯರ್ ಅರುಣ್ ಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎಚ್.ಜಿ.ಪಾರ್ಥಸಾರಥಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುಲ್ನಾಜ್ ಭಾನು, ಸಿ.ಲತಾ, ಅಲುಮೇಲಮ್ಮ, ನಾಗೇಂದ್ರ, ಸುಕನ್ಯ ಸೋಮಸುಂದರ್, ಶಿವಮ್ಮ, ಪಿಡಿಒ ಕೆ.ಚೆಂದಿಲ್, ಲಿಂಗಯ್ಯ, ಮಲ್ಲಿಕಾರ್ಜುನ, ನಟೇಶ್, ಮಂಗಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.