
ಹಲಗೂರು: ಕಾಡಿನಿಂದ ನಾಡಿನ ಕಡೆ ಬಂದ ಒಂಟಿ ಸಲಗವೊಂದು ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದು, ಅತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆಯಿತು.
ಸಮೀಪದ ಗುಂಡಾಪುರ ಗ್ರಾಮದ ಹೊರವಲಯದಲ್ಲಿರುವ ರವಿ ಎಂಬುವವರ ಬಾಳೆ ತೋಟದಲ್ಲಿ ಭಾನುವಾರ ಬೆಳಗಿನ ಜಾವ ಆನೆ ಪ್ರತ್ಯಕ್ಷವಾಗಿದೆ. ಸಾರ್ವಜನಿಕರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ತಕ್ಷಣ ವಿಷಯ ತಿಳಿಸಿದ್ದಾರೆ.
ಕಾವೇರಿ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಆನೆಯನ್ನು ಕಾಡಿಗೆ ಅಟ್ಟಲು ಕಾರ್ಯ ಯೋಜನೆ ರೂಪಿಸಲಾಗುತ್ತಿತ್ತು. ಕಾರ್ಯಚರಣೆ ಆರಂಭಿಸುವ ಮುನ್ನವೇ ಅರಣ್ಯ ಇಲಾಖೆ ಜೀಪ್ ಚಾಲಕ ಎಸ್.ಚೇತನ್ ಅವರನ್ನು ಅಟ್ಟಾಡಿಸಿದ್ದು, ಅದೃಷ್ಟವಶಾತ್ ಅಲ್ಲಿಂದ ತಪ್ಪಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಮೂರು ಕಾಡಾನೆಗಳು ಮದ್ದೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಬೀಮನಕಂಡಿ ಅರಣ್ಯ ಪ್ರದೇಶದ ಕಡೆಗೆ ಹಿಂದಿರುಗುವಾಗ ಒಂಟಿ ಸಲಗ ಬೇರ್ಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚಾರಣೆಯಲ್ಲಿ ಕಾವೇರಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್, ಗವಿಯಪ್ಪ, ಹಲಗೂರು ಉಪವಲಯ ಅರಣ್ಯ ವಲಯ ಅಧಿಕಾರಿ ನಿಹಾಲ್, ಶ್ರೀಧರ್, ಸಿದ್ದರಾಮ ಪೂಜಾರಿ ಸಿಬ್ಬಂದಿ ಇದ್ದಾರೆ.
ಸಾರ್ವಜನಿಕರಲ್ಲಿ ಆತಂಕ: ಒಂಟಿ ಸಲಗವನ್ನು ನೋಡಿ ಜನರು ಅತಂಕಗೊಡರು. ಇನ್ನೂ ಬೇರೆ ಆನೆಗಳು ಇರಬಹುದೆಂದು ಈ ಭಾಗದ ರಸ್ತೆಗಳಲ್ಲಿ ಓಡಾಡಲು ರೈತರು ಹಿಂದೇಟು ಹಾಕಿದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರ ನಿಟ್ಟುಸಿರು ಬಿಟ್ಟರು.
ಆನೆಯು ಸುರಕ್ಷಿತ ಸ್ಥಳದಲ್ಲಿ ಇದ್ದು ಚಲನವಲನದ ಬಗ್ಗೆ ಗಮನ ಹರಿಸಿದ್ದೇವೆ. ಆನೆಯನ್ನು ಸುರಕ್ಷಿತವಾಗಿ ಬಸವನಬೆಟ್ಟ ಅರಣ್ಯ ಪ್ರದೇಶದತ್ತ ಓಡಿಸಲಾಗುವುದುನಾಗೇಂದ್ರ ಪ್ರಸಾದ್ ಕನಕಪುರ ಕಾವೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.