ADVERTISEMENT

ಹಲಗೂರು | ನರೇಗಾ ಅನುದಾನ ಕಡಿತ, ಅಭಿವೃದ್ಧಿಗೆ ಮಾರಕ: ಎಂ.ಪುಟ್ಟಮಾದು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:22 IST
Last Updated 3 ಆಗಸ್ಟ್ 2025, 4:22 IST
ಹಲಗೂರು ಸಮೀಪದ ನಡಕಲಪುರ ಗೇಟ್‌ನಲ್ಲಿ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಹಾಡ್ಲಿ ವಲಯ ಮಟ್ಟದ ಸಮ್ಮೇಳನವನ್ನು ಎಂ.ಪುಟ್ಟಮಾದು ಉದ್ಘಾಟಿಸಿದರು 
ಹಲಗೂರು ಸಮೀಪದ ನಡಕಲಪುರ ಗೇಟ್‌ನಲ್ಲಿ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಹಾಡ್ಲಿ ವಲಯ ಮಟ್ಟದ ಸಮ್ಮೇಳನವನ್ನು ಎಂ.ಪುಟ್ಟಮಾದು ಉದ್ಘಾಟಿಸಿದರು    

ಹಲಗೂರು: ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರ ವಲಸೆ ತಪ್ಪಿಸಲು ಆರಂಭವಾದ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಪ್ರಸ್ತುತ ವರ್ಷ ಅನುದಾನ ಕಡಿತ ಮಾಡಿದ್ದು, ಬಡಜನರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.

ಸಮೀಪದ ನಡಕಲಪುರ ಗೇಟ್‌ನಲ್ಲಿರುವ ನಡುಮಾರ್ಗದ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಶುಕ್ರವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನರೇಗಾ ಯೋಜನೆಗೆ ₹1.25 ಲಕ್ಷ ಕೋಟಿ ಅನುದಾನ ನೀಡಿತ್ತು. ಬಿಜೆಪಿ ಸರ್ಕಾರ ಕಳೆದ ಸಾಲಿನಲ್ಲಿ ₹88 ಸಾವಿರ ಕೋಟಿ ಅನುದಾನ ನೀಡಿತ್ತು. ದೇಶದ ಅಭಿವೃದ್ಧಿಗೆ ₹2.25 ಲಕ್ಷ ಕೋಟಿ ಅನುದಾನ ಅವಶ್ಯವಿದೆ. ಆದರೆ, ಅದನ್ನು ಈ ಬಾರಿ ₹86 ಸಾವಿರ ಕೋಟಿಗೆ ತಗ್ಗಿಸಲಾಗಿದೆ. ಇದು ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.

ADVERTISEMENT

ಈಗಾಗಲೇ ಕೇಂದ್ರ ಸರ್ಕಾರ ₹1.77 ಲಕ್ಷ ಕೋಟಿ ಸಾಲ ಮಾಡಿದ್ದು, ದೇಶದ ಪ್ರತಿ ಪ್ರಜೆಯ ಮೇಲೆ ₹1.27 ಲಕ್ಷ ಸಾಲದ ಹೊರೆ ಹೇರಲಾಗಿದೆ. ಸಾಲದಿಂದ ಅತೀ ಶ್ರೀಮಂತರು, ಉದ್ಯಮಿಗಳಿಗೆ ಅನುಕೂಲ ಆಗಿದೆಯೇ ಹೊರತು, ಶ್ರೀಸಾಮಾನ್ಯನಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ದೂರಿದರು.

ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರವು ಜನರಲ್ಲಿ ಹಿಂದುತ್ವ ಹರಡುವ ಮೂಲಕ ಕೋಮುವಾದ ನಡೆಸುತ್ತಿದೆ. ದೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಹತ್ತಿಕ್ಕುವ ಮೂಲಕ ಸ್ವಘೋಷಿತ ತುರ್ತುಪರಿಸ್ಥಿತಿ ಹೇರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಲಿಕಾರರ ಸಂಘದ ಪದಾಧಿಕಾರಿಗಳಾದ ಬಾಣಸಮುದ್ರ ಗ್ರಾಮದ ಲಕ್ಷ್ಮಮ್ಮ ಧ್ವಜಾರೋಹಣ ನೆರವೇರಿಸಿದರು. ಗೌಡಗೆರೆ ಚಿನ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ವಲಯ ಸಮಿತಿ ಅಧ್ಯಕ್ಷೆ ಜ್ಯೋತಿ, ಕಾರ್ಯದರ್ಶಿ ತಾಳೆಹಳ್ಳಿ ಲಕ್ಷ್ಮೀ, ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಅಧ್ಯಕ್ಷೆ ಮಂಜುಳ, ಮುಖಂಡರಾದ ಟಿ.ಎಚ್.ಆನಂದ್, ಅರುಣ್ ಕುಮಾರ್, ಪಾಪಣ್ಣ, ಗೊಲ್ಲರಹಳ್ಳಿ ಲಕ್ಷ್ಮೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.