
ಹಲಗೂರು: ಇಲ್ಲಿನ ನೂತನ ಗ್ರಾಮ ಪಂಚಾಯಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮೌಢ್ಯ ಸಂಪ್ರದಾಯಗಳನ್ನು ಆಚರಿಸುವ ಮೂಲಕ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಸಾಗ್ಯ ಕೆಂಪಯ್ಯ ಶುಕ್ರವಾರ ಆರೋಪಿಸಿದರು.
ಹಲಗೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಆರ್.ಜಿ.ಪಿ.ಎಸ್.ಎ ಅನುದಾನ ಮತ್ತು ಗ್ರಾಮ ಪಂಚಾಯಿತಿ ಸ್ವಂತ ಅನುದಾನದಡಿ ₹99 ಲಕ್ಷ ವೆಚ್ಚದಲ್ಲಿ ಹಲಗೂರಿನ ಮುತ್ತತ್ತಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಗುರುವಾರ ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ನೂತನ ಕಟ್ಟಡದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ಹವನ ಸೇರಿ ನಿರ್ದಿಷ್ಟ ಸಮುದಾಯದ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹಸು, ಕರುವನ್ನು ಕಚೇರಿಗೆ ಪ್ರವೇಶ ಮಾಡಿಸಿ ಸಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದರು.
ಉದ್ಘಾಟನೆ ಫಲಕದಲ್ಲಿ ಶಿಷ್ಟಾಚಾರ ಪಾಲಿಸುವಾಗ ಉಪಾಧ್ಯಕ್ಷೆ ಸಿ.ಲತಾ ಹೆಸರನ್ನು ಉದ್ದೇಶಪೂರ್ವಕವಾಗಿ ಅಧಿಕಾರಿಗಳ ಹೆಸರಿನ ನಂತರ ಹಾಕಿಸಿದ್ದು ದಲಿತ ಸಮುದಾಯಕ್ಕೆ ಅವಮಾನಿಸಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಬಸವನಹಳ್ಳಿ ಕುಮಾರ್, ಹುಸ್ಕೂರು ಗಂಗಾಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.