ADVERTISEMENT

ಮಂಡ್ಯಕ್ಕೆ ನಾನು ಮಾಡಿದ್ದ ಅನ್ಯಾಯವೇನು? ಸಿದ್ದರಾಮಯ್ಯ ಬೇಸರದ ಪ್ರಶ್ನೆ

ಕಾಂಗ್ರೆಸ್‌ ಪ್ರತಿಭಟನಾ ಸಭೆ; ಬೇಸರದಿಂದ ಪ್ರಶ್ನಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 11:15 IST
Last Updated 19 ಏಪ್ರಿಲ್ 2022, 11:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಮಂಡ್ಯ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಏಳೂ ಅಭ್ಯರ್ಥಿಗಳನ್ನು ಸೋಲಿಸಿಬಿಟ್ಟಿರಿ. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್‌ ಏನು ತಪ್ಪು ಮಾಡಿದ್ದರು, ಮಂಡ್ಯ ಜಿಲ್ಲೆಗೆ ನಾನು ಏನು ಅನ್ಯಾಯ ಮಾಡಿದ್ದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರದಿಂದ ಪ್ರಶ್ನಿಸಿದರು.

ಈಶ್ವರಪ್ಪ ಬಂಧನಕ್ಕೆ ಒತ್ತಾಯ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಸೋಮವಾರ ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಅಕ್ಕಿ ಕೊಟ್ಟಿದ್ದು ತಪ್ಪಾ, ಹಾಲು ಕೊಟ್ಟಿದ್ದು ತಪ್ಪಾ, ಇಂದಿರಾ ಕ್ಯಾಂಟೀನ್‌, ಕೃಷಿ ಭಾಗ್ಯ, ದಲಿತರಿಗೆ, ಹಿಂದು ಳಿದವರಿಗೆ, ಅಲ್ಪ ಸಂಖ್ಯಾತರಿಗೆ ಅನು ಕೂಲ ಮಾಡಿಕೊಟ್ಟಿದ್ದು ತಪ್ಪಾ, ರೈತರ ₹ 50 ಸಾವಿರದವರೆಗೆ ಸಾಲ ಮನ್ನಾ ಮಾಡಿದ್ದು ತಪ್ಪಾ, ಪಶುಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿ ಮಾಡಿದ್ದು ತಪ್ಪಾ. ಯಾವ ತಪ್ಪಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿ ಶಿಕ್ಷೆ ಕೊಟ್ಟಿರಿ’ ಎಂದು ಪ್ರಶ್ನಿಸಿದರು.

‘ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೊಲೆಗಡುಕ ಸರ್ಕಾರ. ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ ಅವರು ಈಶ್ವರಪ್ಪ ವಿರುದ್ಧ ಡೆಟ್‌ನೋಟ್‌ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಈಶ್ವರಪ್ಪ ಅವರನ್ನು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕ್ರಮ ಜರುಗಿಸಬೇಕು. ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡ ದಿನ ನಾನು ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಪತಿ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಸಂತೋಷ್‌ ಪತ್ನಿ ಹೇಳಿದರು. ಇಷ್ಟಾದರೂ ಬಸವರಾಜ ಬೊಮ್ಮಾಯಿ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಕಾಂಗ್ರೆಸ್‌ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಬಿ.ಎಸ್‌.ಶಿವಣ್ಣ, ಎಂ.ಎಸ್‌.ಆತ್ಮಾನಂದ, ರಮೇಶ್‌ಬಾಬು ಬಂಡಿಸಿದ್ದೇಗೌಡ ಇದ್ದಾರೆ

‘ಸಂತೋಷ್‌ ಪಾಟೀಲ ಯಾರೆಂಬುದೇ ಗೊತ್ತಿಲ್ಲ ಎಂದ ಈಶ್ವರಪ್ಪ ಹೇಳಿದ್ದಾರೆ. ಮೊದಲು ಈಶ್ವರಪ್ಪ ಅವರು ಸಂತೋಷ್‌ ಪಾಟೀಲ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅವರ ಪರಿಚಯವೇ ಇರದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುವುದು ಹೇಗೆ ಸಾಧ್ಯ, ಸಂತೋಷ್‌ ಪಾಟೀಲ ಅವರನ್ನು 2 ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿಸಿರುವುದಾಗಿ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್‌ ಹೇಳಿದ್ದಾರೆ, ಇದಕ್ಕಿಂತಾ ಸಾಕ್ಷಿ ಬೇಕಾ’ ಎಂದು ಪ್ರಶ್ನಿಸಿದರು.

‘ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ, ಕೆ.ಸಿ.ರೆಡ್ಡಿ ಅವರಿಂದ ಇಲ್ಲಿಯವರೆಗೂ ಮಂತ್ರಿಗಳು ಶೇ 40ರಷ್ಟು ಲಂಚ ಕೇಳಿಗೆ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದ ನಿದರ್ಶನಗಳಿಲ್ಲ. ಗುತ್ತಿಗೆದಾರರ ಸಂಘ ನೋಂದಾಯಿತ ಸಂಸ್ಥೆಯಾಗಿದ್ದು ಅಧ್ಯಕ್ಷರು ಸರ್ಕಾರದ್ಧ ವಿರುದ್ಧ ಪತ್ರ ಬರೆದಿದ್ದಾರೆ. ಇಷ್ಟಾದರೂ ಪ್ರಧಾನಿ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ. ನರೇಂದ್ರ ಮೋದಿ ದೇಶಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ ಕುರಿತಂತೆ ₹ 600 ಕೋಟಿ ವೆಚ್ಚಕ್ಕೆ ಡಿಪಿಆರ್‌ ತಯಾರಿಸಿದ್ದೆ, ಡಿ.ಕೆ.ಶಿವಕುಮಾರ್‌ ಜಲಸಂಪನ್ಮೂಲ ಸಚಿವರಾಗಿದ್ದಾಗ ₹ 900 ಕೋಟಿಗೆ ಡಿಪಿಆರ್‌ ರೂಪಿಸಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ಅನುದಾನ ನೀಡಿದ್ದೆವು. ಆದರೆ ಈಗಿನ ಬಿಜೆಪಿ ಸರ್ಕಾರ ಎಲ್ಲಾ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿದೆ’ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಜೆಡಿಎಸ್‌ ಮುಖಂಡರು ಜಲಧಾರೆ ಹೆಸರಿನಲ್ಲಿ ರಾಜ್ಯ ಸುತ್ತುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಮೇಕೆದಾಟು ಹೋರಾಟ ಮಾಡಿದ್ದಾಗ, ಪಾದಯಾತ್ರೆ ಮಾಡಿದರೆ ನೀರು ಬರುತ್ತದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈಗ ಜಲಧಾರೆ ಹೆಸರಿನಲ್ಲಿ ರಾಜ್ಯ ಸುತ್ತಿದರೆ ನೀರು ಹರಿದು ಬರುತ್ತದೆಯೇ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘ಜಲಧಾರೆ ಯಾತ್ರೆಗಾಗಿ ಎಚ್‌.ಡಿ.ದೇವೇಗೌಡರನ್ನು ಕೆಆರ್‌ಎಸ್‌ಗೆ ಕರೆಸಿದ್ದರು, ಆದರೆ ಜೆಡಿಎಸ್‌ ಮುಖಂಡರಿಗೆ 4 ಜನ ಕರೆಸಲು ಸಾಧ್ಯವಾಗಲಿಲ್ಲ. ಎಚ್‌.ಡಿ.ದೇವೇಗೌಡರಿಗೆ ಏಕೆ ಅವಮಾನ ಮಾಡುತ್ತೀರಿ, ನಿಮ್ಮ ನಾಟಕಗಳನ್ನು ನಿಲ್ಲಿಸಿ’ ಎಂದು ಹೇಳಿದರು.

ಸಮಾರಂಭದಲ್ಲಿ ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ, ಕೆಪಿಸಿಸಿ ಉಪಾಧ್ಯಕ್ಷ ಸಿ.ಡಿ.ಗಂಗಾಧರ್‌, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಶಿವಣ್ಣ, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌, ಜಿಲ್ಲಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಕೆ.ಬಿ.ಚಂದ್ರಶೇಖರ್‌, ರಮೇಶ್‌ಬಾಬು ಬಂಡಿಸಿದ್ದೇಗೌಡ, ಡಾ.ಎಚ್‌.ಕೃಷ್ಣ, ಗಣಿಗ ರವಿಕುಮಾರ್‌ಗೌಡ, ಎಂ.ಎಸ್‌.ಚಿದಂಬರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.