
ಮಂಡ್ಯ: ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೊಡುಗೆ ನಗರದಲ್ಲಿ ಆಟೊ ನಿಲ್ದಾಣ ನಿರ್ಮಿಸಿರುವುದು ಬಿಟ್ಟರೆ ಜಿಲ್ಲೆಯ ಅಭಿವೃದ್ಧಿ ಮಾತ್ರ ಶೂನ್ಯ’ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಆರೋಪಿಸಿದರು.
ನಗರದ ಆಶಾ ಸದನದ ಅಂಗವಿಕಲರ ವಿದ್ಯಾರ್ಥಿ ನಿಲಯಕ್ಕೆ ಬಂಡಿಸಿದ್ದೇಗೌಡ ಫೌಂಡೇಷನ್ ವತಿಯಿಂದ ಮಂಗಳವಾರ ಉಚಿತವಾಗಿ ಶಾಲಾ ವಾಹನ ನೀಡಿ ಅವರು ಮಾತನಾಡಿದರು.
‘ಬಿಜೆಪಿ ಅವರು ಯಾವ ಮುಖ ಹೊತ್ತುಕೊಂಡು ಬಜೆಟ್ ಸ್ವಾಗತ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನಮಗೆ ಸೇರಬೇಕಾದ ತೆರಿಗೆ ಹಣ ನೀಡಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿದರೆ ನಮಗೆ ಸಮಯ ಕೊಡಲ್ಲ. ಆದರೆ, ಭಾವನಾತ್ಮಕವಾಗಿ ಜನರನ್ನು ಕಟ್ಟಾಕುತ್ತಿದ್ದಾರೆ ಅಷ್ಟೆ’ ಎಂದರು.
‘ಕುಮಾರಸ್ವಾಮಿ ಅವರಿಗೆ ಕೈಮುಗಿದು ಕೇಳಿಕೊಳ್ಳುವೆ. ನಮ್ಮ ಶ್ರೀರಂಗಪಟ್ಟಣದಲ್ಲಿ ವಿಪ್ರೋ ಹಾಗೂ ಶಹನ್ ಪೋಲಂಜಿ ಅವರಿಗೆ 250 ಎಕರೆ ಭೂಮಿ ನೀಡಿದ್ದೇವೆ. ಈ ಎರಡು ಕಂಪನಿಯವರನ್ನು ಕರೆತಂದು ಕೆಲಸ ಪ್ರಾರಂಭಿಸಲಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.