ADVERTISEMENT

ಸನ್ಯಾಸತ್ವ ಸ್ವೀಕರಿಸಿಲ್ಲ, ನಾವೂ ಹೋರಾಡ್ತೀವಿ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:06 IST
Last Updated 20 ಅಕ್ಟೋಬರ್ 2024, 14:06 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಪಾಂಡವಪುರ (ಮಂಡ್ಯ ಜಿಲ್ಲೆ): ‘ನಾವೇನು ಸನ್ಯಾಸತ್ವ ಸ್ವೀಕರಿಸಿದ್ದೇವೆಯೇ? ನಾವೂ ಹೋರಾಟ ಮಾಡುತ್ತೇವೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಚನ್ನ‍ಪಟ್ಟಣದಲ್ಲಿ ಜೆಡಿಎಸ್‌ನವರು ಸೀಟು ಬಿಟ್ಟು ಕೊಡುತ್ತಾರಂತೆ, ಅವರು ಅಷ್ಟು ವೀಕ್ ಆಗಿದ್ದಾರೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಇಲ್ಲಿ ಭಾನುವಾರ ತಿರುಗೇಟು ನೀಡಿದ ಕುಮಾರಸ್ವಾಮಿ, ‘ನಾವೇನು ಸನ್ಯಾಸತ್ವ ಸ್ವೀಕರಿಸಿಲ್ಲ. ಅವರು ಹೇಳಿದಂತೆ ಆಗುತ್ತದೆಯೇ? ಚುನಾವಣೆ ಗೆಲ್ಲಲು ಏನು ಬೇಕೋ ಆ ನಿರ್ಧಾರವನ್ನು ನಾವೂ ಮಾಡುತ್ತೇವೆ’ ಎಂದರು.

‘ಮಾಜಿ ಸಂಸದ ಡಿ.ಕೆ.ಸುರೇಶ್ ನನ್ನ ವಿರುದ್ಧ ಏಕವಚನ ಬಳಸಿದ್ದನ್ನು ಗಮನಿಸಿದ್ದೇನೆ. ಅವರ ಸಂಸ್ಕೃತಿ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಜನರು ಬಹಳ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಆದರೆ, ಈ ಸರ್ಕಾರ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ. ದಿನವೂ ಒಂದೊಂದು ಅಕ್ರಮಗಳು ಬೆಳಕಿಗೆ ಬರುತ್ತಿವೆ. ನನಗೆ ಮಣ್ಣಿನ ಮೇಲೆ ಆಸೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇರುತ್ತಾರೆ. ಇನ್ನೊಂದೆಡೆ, ಒಂದೊಂದೇ ವಿಕೆಟ್ ಬೀಳುತ್ತಲೇ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತೆ ಇದೆ’ ಎಂದರು.

‘ಐದು ವರ್ಷದ ಪೂರ್ಣ ಬಹುಮತದ ಸರ್ಕಾರವನ್ನು ಜನರು ನನಗೆ ನೀಡಬಹುದು ಎಂದು ವಿಶ್ವಾಸ ಹೊಂದಿದ್ದೇನೆ. ನಾನು ವಿಶ್ವಾಸ ಇಟ್ಟುಕೊಳ್ಳಲು ಅವರ (ಡಿಕೆಶಿ) ಅನುಮತಿ ತೆಗೆದುಕೊಳ್ಳಬೇಕಾ?’ ಎಂದು ಕೇಳಿದರು.

‘ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಆದರೆ, ಈ ಸರ್ಕಾರ ಜನರ ಹಣವನ್ನು ಪೋಲು ಮಾಡುತ್ತಿದೆ. ಜನರು ಇದಕ್ಕೆ ಕಡಿವಾಣ ಹಾಕಿ ನೆಮ್ಮದಿಯ ಬದುಕಿಗಾಗಿ ನನಗೆ ಅವಕಾಶ ನೀಡುತ್ತಾರೆ ಎನ್ನುವುದು ತಪ್ಪಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.