ADVERTISEMENT

ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ರೋಗಿಗಳ ಸಮಸ್ಯೆ ಆಲಿಸಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 13:45 IST
Last Updated 9 ಏಪ್ರಿಲ್ 2025, 13:45 IST
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಮಿಮ್ಸ್‌) ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ, ರೋಗಿಗಳ ಸಮಸ್ಯೆ ಆಲಿಸಿದರು. ಮಾಜಿ ಶಾಸಕ ಕೆ.ಅನ್ನದಾನಿ, ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ವಿಜಯ್‌ ಆನಂದ್‌, ಜಿಲ್ಲಾಧಿಕಾರಿ ಕುಮಾರ ಜತೆಯಲ್ಲಿದ್ದಾರೆ 
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಮಿಮ್ಸ್‌) ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ, ರೋಗಿಗಳ ಸಮಸ್ಯೆ ಆಲಿಸಿದರು. ಮಾಜಿ ಶಾಸಕ ಕೆ.ಅನ್ನದಾನಿ, ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ವಿಜಯ್‌ ಆನಂದ್‌, ಜಿಲ್ಲಾಧಿಕಾರಿ ಕುಮಾರ ಜತೆಯಲ್ಲಿದ್ದಾರೆ    

ಮಂಡ್ಯ: ಇಲ್ಲಿನ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಮಿಮ್ಸ್) ಭೇಟಿ ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಅಧೀನ ಕಂಪನಿಗಳ ₹3 ಕೋಟಿ ಸಿ.ಎಸ್‌.ಆರ್‌ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ ಹಾಗೂ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಜತೆ ಸಭೆ ನಡೆಸಿದರು. ಮಿಮ್ಸ್‌ನಲ್ಲಿ ಹೊಸ ಶೌಚಾಲಯ ಬ್ಲಾಕ್ ನಿರ್ಮಾಣ, ಹಳೆಯ ಶೌಚಾಲಯಗಳ ನವೀಕರಣ, ಹೊಸ ಲಿಫ್ಟ್ ಅಳವಡಿಕೆ, ಮಕ್ಕಳ ಆರೈಕೆ ಘಟಕದ ಚಾವಣಿ, ಹೊಸ ಕಿಟಕಿ ಬಾಗಿಲು ಅಳವಡಿಕೆ, ಕಟ್ಟಡಕ್ಕೆ ಬಣ್ಣ ಸೇರಿದಂತೆ ಇನ್ನಿತರೆ ಕಾಮಗಾರಿಗಳ ಉದ್ದೇಶಕ್ಕಾಗಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. 

ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ (ಬಿ.ಎಚ್‌.ಇ.ಎಲ್‌) ಹಾಗೂ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌.ಎ.ಐ.ಎಲ್‌), ಭಾರತೀಯ ಖನಿಜಾಭಿವೃದ್ಧಿ ನಿಗಮ (ಎನ್‌.ಎಂ.ಡಿ.ಸಿ) ವತಿಯಿಂದ ವಿಮ್ಸ್‌ಗೆ ಸಿ.ಎಸ್.ಆರ್ ನೆರವು ನೀಡಿವೆ. ಕ್ಯಾನ್ಸರ್ ಚಿಕಿತ್ಸಾ ಘಟಕದ ಉನ್ನತೀಕರಣಕ್ಕೂ ಅನುದಾನ ನೀಡುವುದಾಗಿ ಸಚಿವರು ಹೇಳಿದರು.

ADVERTISEMENT

ಅಲ್ಲದೆ, ರೋಗಿಗಳಿಗೆ ಅನುಕೂಲ ಆಗುವಂತೆ ಮಿಮ್ಸ್‌ನಲ್ಲಿ ಒಟ್ಟಾರೆ ಎಲ್ಲ ರೀತಿಯ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.

ಜನತಾದರ್ಶನ:

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು. 

ಕಂದಾಯ ಇಲಾಖೆ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಉದ್ಯೋಗ, ಶಿಕ್ಷಣ, ಆರೋಗ್ಯ ಇನ್ನಿತರೆ ವಿಷಯಗಳಲ್ಲಿ ಸಾರ್ವಜನಿಕರು ಮನವಿಗಳನ್ನು ಸಲ್ಲಿಸಿದರು. ಸಾರ್ವಜನಿಕರಲ್ಲಿ ಬಹುತೇಕರು ಸ್ಥಳದಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು. 

ಮುಖ್ಯವಾಗಿ ಅನೇಕ ಅಂಗವಿಕಲರು ಸಚಿವರಿಗೆ ತಮ್ಮ ಅಹವಾಲು ಹೇಳಿಕೊಂಡರು. ಕಂದಾಯ ಇಲಾಖೆಗೆ ಸಂಬಂಧಿಸಿದ ಮನವಿಗಳು ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದವು. 

ಹೈಟೆಕ್ ಆಟೊ ನಿಲ್ದಾಣ ನಿರ್ಮಾಣಕ್ಕೆ ಕ್ರಮ

ಮಂಡ್ಯ ನಗರದ ಆಟೊ ಚಾಲಕರ ಅನುಕೂಲಕ್ಕಾಗಿ ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದ ಬಳಿ ಸಂಸದರ ನಿಧಿಯಲ್ಲಿ ಸುಸಜ್ಜಿತ ಹೈಟೆಕ್‌ ಮಾದರಿಯ ಆಟೊ ನಿಲ್ದಾಣ ನಿರ್ಮಾಣಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಟೊ ಚಾಲಕರಿಗೆ ಭರವಸೆ ನೀಡಿದರು. ನಾಳೆಯಿಂದಲೇ ಆಟೊ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವೆ ಎಂದರು. ನಗರದ ಸಂಜಯ್ ಸರ್ಕಲ್ ಮತ್ತು ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಆಟೊ ನಿಲ್ದಾಣಗಳಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಅವರು ಕೆಲ ಹೊತ್ತು ಅಲ್ಲಿ ಆಟೊ ಚಾಲಕರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.