ADVERTISEMENT

ಹುಲ್ಲಾಗಾಲ: ಬಸವೇಶ್ವರ ವಿಮಾನ ಗೋಪುರ– ಕಳಸ ಪ್ರತಿಷ್ಟಾಪನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:05 IST
Last Updated 10 ಫೆಬ್ರುವರಿ 2026, 6:05 IST
ಹಲಗೂರು ಸಮೀಪದ ಹುಲ್ಲಾಗಾಲ ಗ್ರಾಮದ ಬಸವೇಶ್ವರ ವಿಮಾನ ಗೋಪುರ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪೂರ್ಣಕುಂಭದೊಂದಿಗೆ ಕಳಸ ತರಲಾಯಿತು 
ಹಲಗೂರು ಸಮೀಪದ ಹುಲ್ಲಾಗಾಲ ಗ್ರಾಮದ ಬಸವೇಶ್ವರ ವಿಮಾನ ಗೋಪುರ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪೂರ್ಣಕುಂಭದೊಂದಿಗೆ ಕಳಸ ತರಲಾಯಿತು    

ಹಲಗೂರು: ಸಮೀಪದ ಹುಲ್ಲಾಗಾಲ ಗ್ರಾಮದ ಶ್ರೀ ಬಸವೇಶ್ವರ ವಿಮಾನ ಗೋಪುರ, ಕಳಸ ಪ್ರತಿಷ್ಠಾಪನೆ ಮತ್ತು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ಭಾನುವಾರದಿಂದ ಆರಂಭವಾಗಿ ಸೋಮವಾರದವರೆಗೆ ಎರಡು ದಿನಗಳು ವಿಜೃಂಭಣೆಯಿಂದ ನೆರವೇರಿತು.

ಭಾನುವಾರ ಸಂಜೆ 6 ಗಂಟೆಗೆ ಪುಣ್ಯಹ, ಗಣಪತಿ ಪೂಜೆ, ಹೋಮ ನಾಂದಿ, ಅಂಕುರಾರ್ಪಣ, ರಕ್ಷಾ ಸೂತ್ರಧಾರಣ, ರಾಘೋಪ್ನ, ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಮಹಾ ಮಂಗಳಾರತಿ, ರಾತ್ರಿ 7 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಸೋಮವಾರ ಗ್ರಾಮದಲ್ಲಿರುವ ಮೊಗೆವ ಕಟ್ಟೆಯಿಂದ ದೇವರಿಗೆ ಹೂ ಹೊಂಬಾಳೆ ಮಾಡಿ ಗಂಗೆ ತರಲಾಯಿತು. ನಂತರ ಶ್ರೀ ಬಸವೇಶ್ವರ ದೇವಾಲಯಕ್ಕೆ ನೂತನ ಗೋಪುರ ಕಳಸ ಪೂಜಾ ಕಾರ್ಯಕ್ರಮ ನಡೆಯಿತು. ನವಗ್ರಹ ಹೋಮ, ಮಹಾ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆದವು.

ADVERTISEMENT

ವೀರಗಾಸೆ ಕುಣಿತ ಮತ್ತು ಜಾನಪದ ಕಲಾವಿದ ಶಿವಾರ ಉಮೇಶ್ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಭಕ್ತಾದಿಗಳ ಗಮನ ಸೆಳೆಯಿತು.

ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ, ದೊಡ್ಡಚೆನ್ನೀಪುರ ಮಲೆ ಮಹದೇಶ್ವರ ಸ್ವಾಮಿ ಬಸಪ್ಪ, ನಡುಮಾರ್ಗದ ಬಸವೇಶ್ವರ ಸ್ವಾಮಿ ಬಸಪ್ಪ ದೇವರು ಮೆರವಣಿಗೆ ನಡೆಯಿತು.

ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮಿ, ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿಸ್ವಾಮಿ, ಹಂಗ್ರಾಪುರ ಮಠದ ಬಸವಲಿಂಗ ದೇಶಿಕೇಂದ್ರ ಸ್ವಾಮಿ, ದಬ್ಬಹಳ್ಳಿ ಗುರುಮಠದ ಚನ್ನವೀರಣ್ಣಾರಾಧ್ಯ ಸ್ವಾಮಿ, ಅಗಸನಪುರ ಗುರುಮಠದ ಚಂದ್ರಶೇಖರ್ ಅರಾಧ್ಯ ಅವರು ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಅಂತರವಳ್ಳಿ, ಹುಲ್ಲಹಳ್ಳಿ, ದಡಮಹಳ್ಳಿ, ಹುಸ್ಕೂರು, ಹುಚ್ಚೇಗೌಡನದೊಡ್ಡಿ, ಚೆನ್ನೀಪುರ ಅಗಸನಪುರ, ಡಿ.ಹಲಸಹಳ್ಳಿ, ಪುರದದೊಡ್ಡಿ ಸೇರಿ ಹಲ್ಲಾಗಾಲ ಗ್ರಾಮದ ಸುತ್ತಮುತ್ತಲಿನ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.

ಹಲಗೂರು ಸಮೀಪದ ಹುಲ್ಲಾಗಾಲ ಗ್ರಾಮದ ಬಸವೇಶ್ವರ ವಿಮಾನ ಗೋಪುರ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪೂಜಾ ಉತ್ಸವ ನಡೆಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.