ADVERTISEMENT

‘ಮಾನವ ಹಕ್ಕು’ ಹೆಸರು ದುರ್ಬಳಕೆ: ನೋಂದಣಿ ತಡೆಗೆ ಚಿಂತನೆ

ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಂಭಟ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 0:52 IST
Last Updated 1 ಮಾರ್ಚ್ 2025, 0:52 IST
ಟಿ.ಶ್ಯಾಂಭಟ್‌
ಟಿ.ಶ್ಯಾಂಭಟ್‌   

ಮಂಡ್ಯ: ‘ಮಾನವ ಹಕ್ಕು’ ಹೆಸರಿನಲ್ಲಿ ಸಂಘ, ಜಾಗೃತಿ ಸಮಿತಿ, ಹೋರಾಟ ಸಮಿತಿ ಮಾಡಿಕೊಂಡು, ‘ಮಾನವ ಹಕ್ಕುಗಳ ಆಯೋಗ’ದವರ ಸೋಗಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಹಕಾರ ಇಲಾಖೆಯ ರಿಜಿಸ್ಟ್ರಾರ್‌ ಜೊತೆ ಚರ್ಚಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಂಭಟ್‌ ತಿಳಿಸಿದರು. 

ಇಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಾನವ ಹಕ್ಕು’ ಹೆಸರು ದುರ್ಬಳಕೆ ಮಾಡಿಕೊಂಡು, ಕಾರುಗಳಿಗೆ ನಾಮಫಲಕ ಹಾಕಿಕೊಳ್ಳುವುದು, ವಿಸಿಟಿಂಗ್‌ ಕಾರ್ಡ್‌ ಮಾಡಿಸಿಕೊಳ್ಳುವುದು, ಸರ್ಕಾರಿ ಅಧಿಕಾರಿಗಳನ್ನು ಬೆದರಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ‘ಮಾನವ ಹಕ್ಕುಗಳು’ ಹೆಸರು ಬಳಸಿ ನೋಂದಣಿ ಮಾಡಿಸದಂತೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಪ್ರಯತ್ನಿಸುತ್ತಿದೆ’ ಎಂದರು.

‘ಕೆಲವು ಸಂಸ್ಥೆಗಳು ಮಾನವ ಹಕ್ಕುಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದ್ದು, ಆ ಸಂಸ್ಥೆಗಳು ಪ್ರತಿವರ್ಷ ‘ಆಡಿಟಿಂಗ್‌’ ಸಲ್ಲಿಸದಿದ್ದರೆ ಮತ್ತು ನಿಯಮಗಳನ್ನು ಪಾಲಿಸದಿದ್ದರೆ ನೋಂದಣಿ ರದ್ದು ಮಾಡಲು ಅವಕಾಶವಿದೆ’ ಎಂದು ತಿಳಿಸಿದರು. 

ADVERTISEMENT

3 ಸಾವಿರ ಪ್ರಕರಣ ಬಾಕಿ: ‘ನಾನು ಅಧ್ಯಕ್ಷನಾಗುವ ವೇಳೆಗೆ, ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ 5,400 ಪ್ರಕರಣಗಳು ಬಾಕಿ ಇದ್ದವು. ಮತ್ತೆ ಒಂದು ವರ್ಷದಲ್ಲಿ 6,417 ದೂರುಗಳು ದಾಖಲಾದವು. ಈಗಾಗಲೇ 8,777 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 3ಸಾವಿರ ಪ್ರಕರಣಗಳು ಬಾಕಿ ಇವೆ. ಆಯೋಗಕ್ಕೆ ಆನ್‌ಲೈನ್‌, ಪೋಸ್ಟ್‌ ಹಾಗೂ ಖುದ್ದಾಗಿ ಬಂದು ದೂರು ಸಲ್ಲಿಸಬಹುದು. ಮಾಧ್ಯಮಗಳ ವರದಿ ಆಧರಿಸಿ, ಆಯೋಗವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತದೆ’ ಎಂದು ಹೇಳಿದರು.

‘ನೇರವಾಗಿ ದಂಡ ವಿಧಿಸುವ ಅಧಿಕಾರ ಆಯೋಗಕ್ಕೆ ಇಲ್ಲ. ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಈಗಾಗಲೇ ವಿವಿಧ  ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ₹2.40 ಕೋಟಿ ಪರಿಹಾರ ಪಾವತಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.