ಸಂತೇಬಾಚಹಳ್ಳಿ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಅಘಲಯ ಕೆರೆ ತುಂಬಿ ಹರಿದಿದ್ದರಿಂದ ಹಳ್ಳ ಒಡೆದು ನೂರಾರು ಎಕರೆ ಜಲಾವೃತವಾಗಿದೆ.
ಶ್ರವಣಬೆಳಗೊಳ ಹಾಗೂ ಮೇಲುಕೋಟೆ ಸೇರಿ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದೆ. ಭಾರಿ ನೀರು ಹಳ್ಳದ ಮೂಲಕ ಬರುವ ವೇಳೆ ಏರಿ ಒಡೆದು ತೋಟಗಳಿಗೆ ನುಗ್ಗಿ ಹಾನಿಯಾಗಿದೆ.
‘ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಕೂಡಲೇ ಭೇಟಿ ನೀಡಬೇಕು. ರಾಜ್ಯ ಹೆದ್ದಾರಿ, ಹಳ್ಳದ ಏರಿ, ಕೆರೆ ಏರಿ ದುರಸ್ತಿ ಮಾಡಬೇಕು. ಅಘಲಯ, ದೊಡ್ಡಸೋಮನಹಳ್ಳಿ, ಹಲಸನಹಳ್ಳಿ, ಮೂಲಕ ಹಾದು ಹೋಗುವ ಹಳ್ಳದ ಅಕ್ಕಪಕ್ಕದ ಜಮೀನಿನ ಫಸಲು ಹಾನಿಯಾಗಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಗ್ರಾಮದ ರೈತ ಮಹಿಳೆ ಮಮತಾ ಎಚ್ಚರಿಕೆ ನೀಡಿದ್ದಾರೆ.
ಅಘಲಯದಲ್ಲಿ 2020ರಲ್ಲಿ ಭಾರಿ ಮಳೆಗೆ ಕೆರೆ ಏರಿ ಒಡೆದು ಹಾನಿಯಾಗಿತ್ತು. ಸ್ಥಳಕ್ಕೆ ಅಂದಿನ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಚಿವ ಕೆ.ಸಿ ನಾರಾಯಣಗೌಡ ಭೇಟಿ ನೀಡಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಆದರೆ ಇನ್ನೂವರೆಗೂ ಏರಿ, ರಸ್ತೆ, ಹಳ್ಳ ದುರಸ್ತಿಯಾಗಿಲ್ಲ. ಪ್ರತಿ ಬಾರಿ ಮಳೆಯಾದಾಗ ನೂರಾರು ಎಕರೆ ಅಡಿಕೆ, ತೆಂಗು, ಬಾಳೆ ಫಸಲು ಜಲಾವೃತವಾಗುತ್ತಿವೆ.
‘ಕೆರೆ ಏರಿ ಕುಸಿದಿದ್ದು, ಒಡೆಯುವ ಭೀತಿಯಲ್ಲಿದೆ. ಮೂರು ವರ್ಷಗಳಿಂದ ಭಾರಿ ಮಳೆಗೆ ನೂರಾರು ಎಕರೆ ಜಲಾವೃತವಾಗಿ ರೈತರಿಗೆ ನಷ್ಟವಾಗುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು, ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಗ್ರಾಮಸ್ಥರಾದ ಸಚಿನ್, ಮಂಜುನಾಥ್, ದೇವರಾಜು, ನಿಂಗೇಗೌಡ, ಗಣೇಶ, ಶ್ರೀಧರ್, ಧನಲಕ್ಷಿ, ಶಶಾಂಕ್, ಸತೀಶ್, ಮಂಜೇಗೌಡ ಎಚ್ಚರಿಸಿದರು.
ಅಘಲಯ ಹಾಗೂ ದೊಡ್ಡಸೋಮನಹಳ್ಳಿ ಸಂಪರ್ಕ ಕಡಿತವಾಗುವ ಭೀತಿಯಿದೆ. ದೊಡ್ಡಸೋಮನಹಳ್ಳಿ ಗ್ರಾಮದ ಸಾರ್ವಜನಿಕರು ಆಸ್ಪತ್ರೆ, ಬ್ಯಾಂಕ್, ಗ್ರಾಮ ಪಂಚಾಯಿತಿಗೆ ತೆರಳಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ’ ಎಂದು ದೊಡ್ಡಸೋಮನಹಳ್ಳಿ ಮೊಗಣ್ಣ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.