ADVERTISEMENT

ಐಟಿ ದಾಳಿಗೂ ನನಗೂ ಸಂಬಂಧವಿಲ್ಲ, ಜೆಡಿಎಸ್ ದೌರ್ಜನ್ಯ ಮೇರೆ ಮೀರಿದೆ: ಸುಮಲತಾ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 5:15 IST
Last Updated 28 ಮಾರ್ಚ್ 2019, 5:15 IST
   

ಮಂಡ್ಯ: ‘ರಾಜ್ಯದಲ್ಲಿ ಗುರುವಾರ ಜೆಡಿಎಸ್ ನಾಯಕರ ಮನೆಗಳ ಮೇಲೆ ನಡೆದ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ಸಾಮಾನ್ಯ ಅಭ್ಯರ್ಥಿ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಪುಟ್ಟರಾಜು ಅವರು ಹೇಳುವಷ್ಟು ಪವರ್‌ ನನಗಿಲ್ಲ. ನನಗೆ ಅಷ್ಟೊಂದು ಪವರ್ ಇದೆ ಅಂದುಕೊಂಡಿದ್ದಾರೆ ಸಂತೋಷ. ಒಂದು ಐಟಿ ದಾಳಿ ಆಗಬೇಕು ಅಂದ್ರೆ ಅದಕ್ಕೆ ಮೂರು ತಿಂಗಳ ಸಿದ್ಧತೆ ಬೇಕು.ರೇಡ್ ಆದ ತಕ್ಷಣ ನಾನು ಮಾಡಿಸಿದ್ದೇನೆ ಅಂತಿದ್ದಾರೆ. ಇವರ ಮಾತು ಕೇಳಿದ್ರೆ ನಗು ಬರುತ್ತೆ.ತೆರಿಗೆ ಇಲಾಖೆ ಅಧಿಕಾರಿಗಳು ಸುಮ್ಮನೆ ದಾಳಿ ಮಾಡಲ್ಲ. ನೀವು ತಪ್ಪುಮಾಡಿಲ್ಲ ಅಂತಾದ್ರೆ ಭಯ ಏಕೆ? ಬೇಜಾರೇಕೆ?’ ಎಂದು ಪ್ರಶ್ನಿಸಿದರು.

‘ಮೊನ್ನೆಯಷ್ಟೇ ನಟ ಯಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮನೆಗಳ ಮೇಲೆ ದಾಳಿ ನಡೆಯಿತು. ಅವರೇನು ಜೆಡಿಎಸ್ ಕಾರ್ಯಕರ್ತರಾ?ಅವರಿಬ್ಬರೂ ಈಗ ನನ್ನ ಜೊತೆಗೆ ಇಲ್ವಾ?’ ಎಂದು ಮರುಪ್ರಶ್ನೆ ಹಾಕಿದರು.

ADVERTISEMENT

‘ಐಟಿ ಇಲಾಖೆಯನ್ನು ಕೇಂದ್ರ ಸರ್ಕಾರ ರಾಜಕೀಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಜೆಡಿಎಸ್‌ ಮುಖಂಡರು ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತೆ?ನನ್ನಬೆಂಬಲಿಗರನ್ನು ಗುರುತಿಸಿ ಅವರ ಜೀವನಕ್ಕೆ ಆಧಾರವಾಗಿರುವ ವ್ಯಾಪಾರ, ವಹಿವಾಟು, ಉದ್ಯೋಗಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ನನ್ನ ಬೆಂಬಲಿಗರ ಅಂಗಡಿ–ಹೋಟೆಲ್‌ಗಳ ಲೈಸೆನ್ಸ್‌ ತೆಗೆಸುವ ಕೀಳು ಮಟ್ಟದ ರಾಜಕಾರಣ ಜಿಲ್ಲೆಯಲ್ಲಿ ನಡೆಯುತ್ತಿದೆ’ ಎಂದು ನೇರ ಅರೋಪ ಮಾಡಿದರು.

‘ಜೆಡಿಎಸ್ ನಾಯಕರು ನನ್ನ ಬೆಂಬಲಿಗರಿಗೆ ಕೊಡುತ್ತಿರುವ ಕಿರುಕುಳದ ಬಗ್ಗೆ ಮುಂದಿನ ದಿನಗಳಲ್ಲಿ ಪುರಾವೆ ಸಹಿತ ಮಾತನಾಡುತ್ತೇನೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.