ADVERTISEMENT

ಮದ್ಯ ಅಕ್ರಮ ಮಾರಾಟ; ಬೀಳದ ಕಡಿವಾಣ

3 ವರ್ಷಗಳಲ್ಲಿ ನಡೆದ 5,652 ದಾಳಿಗಳಲ್ಲಿ 3,339 ಆರೋಪಿಗಳ ಬಂಧನ; 43 ಸಾವಿರ ಲೀಟರ್‌ ಮದ್ಯ ಜಪ್ತಿ

ಸಿದ್ದು ಆರ್.ಜಿ.ಹಳ್ಳಿ
Published 6 ಫೆಬ್ರುವರಿ 2026, 5:52 IST
Last Updated 6 ಫೆಬ್ರುವರಿ 2026, 5:52 IST
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಸಿಬ್ಬಂದಿ ಬಂಧಿಸಿರುವ ದೃಶ್ಯ (ಸಂಗ್ರಹ ಚಿತ್ರ)
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಸಿಬ್ಬಂದಿ ಬಂಧಿಸಿರುವ ದೃಶ್ಯ (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲೆಯಲ್ಲಿ ಮದ್ಯ ಅಕ್ರಮ ಮಾರಾಟ ಮತ್ತು ಸಾಗಣೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸಿದರೂ ಈ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. 

ಕಳೆದ ಮೂರು ವರ್ಷಗಳಲ್ಲಿ ಅಬಕಾರಿ ಇಲಾಖೆ ವತಿಯಿಂದ 5,652 ದಾಳಿಗಳು ನಡೆದು, 3,339 ಆರೋಪಿಗಳನ್ನು ಬಂಧಿಸಲಾಗಿದೆ. ಬರೋಬ್ಬರಿ 43 ಸಾವಿರ ಲೀಟರ್‌ ಮದ್ಯ ಮತ್ತು 46 ಸಾವಿರ ಲೀಟರ್‌ ಬಿಯರ್‌ ಅನ್ನು ಜಪ್ತಿ ಮಾಡಲಾಗಿದೆ. 

2025ನೇ ಸಾಲಿನಲ್ಲಿ ನಡೆದ ದಾಳಿಗಳಲ್ಲಿ 363 ಲೀಟರ್‌ ಮದ್ಯ, 42 ಲೀಟರ್‌ ಬಿಯರ್‌, 168 ಲೀಟರ್‌ ಸೇಂದಿಯನ್ನು ಅಬಕಾರಿ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. 2024–25ನೇ ಸಾಲಿನಲ್ಲಿ 43 ಲೀಟರ್‌ ‘ನಕಲಿ ಮದ್ಯ’ ಮತ್ತು 44 ಲೀಟರ್‌ ‘ಕಲಬೆರಕೆ ಮದ್ಯ’ವನ್ನೂ ವಶಪಡಿಸಿಕೊಂಡಿದ್ದರು. ಜೊತೆಗೆ 25 ಕೆ.ಜಿ.ಗಾಂಜಾವನ್ನು ಜಪ್ತಿ ಮಾಡಿದ್ದರು. 

ADVERTISEMENT

ಜಿಲ್ಲೆಯು ಸುಮಾರು 17 ಲಕ್ಷ ಜನಸಂಖ್ಯೆ ಹೊಂದಿದೆ. ಏಳು ತಾಲ್ಲೂಕುಗಳಲ್ಲಿ ಪರವಾನಗಿ ಪಡೆದ 352 ವೈನ್ ಶಾಪ್‌ಗಳಿಂದ ತಿಂಗಳಿಗೆ ಬರೋಬ್ಬರಿ 24 ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದೆ. 

‘2025–26ನೇ ಸಾಲಿನಲ್ಲಿ ಸಿಎಲ್‌–7 ಸನ್ನದು ಮಂಜೂರಾತಿಗೆ 18 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 16ಕ್ಕೆ ಮಂಜೂರಾತಿ ನೀಡಿದ್ದು, ಒಂದು ಅರ್ಜಿ ತಿರಸ್ಕೃತಗೊಂಡಿದ್ದು, ಮತ್ತೊಂದು ಪರಿಶೀಲನೆ ಹಂತದಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬಡ ಕುಟುಂಬ ಬೀದಿಪಾಲು: 

‘ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರತಿಷ್ಠಿತ ಹೋಟೆಲ್‌ಗಳಲ್ಲೇ ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಲಾಗುತ್ತದೆ. ಯುವಕರು ಕುಡಿತದ ಚಟದಿಂದ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಡ ಕುಟುಂಬಗಳು ಬೀದಿಪಾಲಾಗಿವೆ’ ಎಂದು ಮಹಿಳೆಯರು ಸಮಸ್ಯೆ ತೋಡಿಕೊಂಡರು. 

ಅಕ್ರಮದ ಬಗ್ಗೆ ಮಾಹಿತಿ ನೀಡಿ:

‘ಮದ್ಯ ಅಕ್ರಮ ಮಾರಾಟ ಅಥವಾ ಸಂಗ್ರಹಣೆ ಕಂಡುಬಂದರೆ ‘ಡ್ರಗ್ ಫ್ರೀ ಕರ್ನಾಟಕ ಆ್ಯಪ್‌’ ಮೂಲಕ ಮಾಹಿತಿ ನೀಡಬಹುದು. ಟೋಲ್‌ ಫ್ರೀ ನಂಬರ್‌ 8004253854 ಗೂ ಕರೆ ಮಾಡಬಹುದು. ಮಾಹಿತಿ ನೀಡಿದವರ ವಿವರವನ್ನು ಗೋಪ್ಯವಾಗಿಡಲಾಗುವುದು. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಎನ್‍.ಡಿ.ಪಿ.ಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡ್ಯ ಜಿಲ್ಲೆಯ ಅಬಕಾರಿ ಅಧೀಕ್ಷಕ ಎನ್‌.ರಮೇಶ್‌ ತಿಳಿಸಿದ್ದಾರೆ. 

ಸುನಂದಾ ಜಯರಾಂ 
ಮದ್ಯ ಅಕ್ರಮ ಮಾರಾಟದಂಥ ದಂಧೆಯ ಹಣ ಚುನಾವಣೆಯಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಬಡ ಕುಟುಂಬಗಳ ಮಹಿಳೆಯರು ಬೀದಿಪಾಲಾಗುತ್ತಿದ್ದರು. ಈ ದಂಧೆಗೆ ಕಡಿವಾಣ ಬೀಳಲಿ
– ಸುನಂದಾ ಜಯರಾಂ ರೈತ ಹೋರಾಟಗಾರ್ತಿ

‘ಅಕ್ರಮ ಮಾರಾಟ ಪತ್ತೆಹಚ್ಚಿ’

  ‘ಶಾಲಾ ಆವರಣ ಹಾಗೂ ಸ್ಲಂ ಗ್ರಾಮೀಣ ಭಾಗದ ಕೆಲವು ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹದಿಹರೆಯದ ಮಕ್ಕಳು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಅಕ್ರಮ ಮಾರಾಟವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ಈ ಬಗ್ಗೆ ಆಯೋಗಕ್ಕೆ ವರದಿ ನೀಡಿ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಕೆ. ನಾಗಣ್ಣಗೌಡ ಅವರು ಕೆಲ ತಿಂಗಳ ಹಿಂದೆ ಸೂಚನೆ ನೀಡಿದ್ದರು.

  ‘ಕೊಳೆಗೇರಿ ಪ್ರದೇಶಗಳಲ್ಲಿ ಯುವಕರು ಮದ್ಯ ಸೇವಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಹಾಗೂ ಸ್ಲಂಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವವರು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಈಚೆಗೆ ಸಭೆಯಲ್ಲಿ ತಾಕೀತು ಮಾಡಿದ್ದರು. 

‘ಮಂತ್ಲಿ ಮಾಮೂಲಿ ಫಿಕ್ಸ್‌!’

‘ಮಂಡ್ಯ ಜಿಲ್ಲೆಯಲ್ಲಿ ನಕಲಿ ಮದ್ಯ ಮತ್ತು ಪರವಾನಗಿಯಿಲ್ಲದೆ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸಿ.ಎಲ್‌–7 ಲೈಸೆನ್ಸ್‌ ನೀಡಲು ₹75 ಲಕ್ಷದಿಂದ ₹1 ಕೋಟಿಯವರೆಗೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆರೋಪವಿದೆ. ತಲಾ ವೈನ್‌ ಶಾಪ್‌ನಿಂದ ತಿಂಗಳಿಗೆ ₹22 ಸಾವಿರದಂತೆ ಜಿಲ್ಲೆಯಲ್ಲಿರುವ 353 ವೈನ್‌ ಶಾಪ್‌ಗಳಿಂದ ಸುಮಾರು ₹75 ಲಕ್ಷ ಮಂತ್ಲಿ ಮಾಮೂಲಿ (ಎಂ.ಎಂ.) ಕಲೆಕ್ಟ್‌ ಆಗಿ ಆಯಾಕಟ್ಟಿನ ಹುದ್ದೆಗಳಿಗೆ ಹಂಚಿಕೆಯಾಗುತ್ತದೆ ಎನ್ನುವ ಗಂಭೀರ ಆರೋಪವಿದೆ’ ಎಂದು ಕರುನಾಡ ಸೇವಕರು ಸಂಘಟನೆ ಮುಖಂಡ ಎಂ.ಬಿ. ನಾಗಣ್ಣಗೌಡ ದೂರಿದರು.  ಸಿ.ಎಲ್‌.–7 ಸನ್ನದು ಪರವಾನಗಿ ಮಂಜೂರಾತಿಗೆ ಮಂಡ್ಯ ಜಿಲ್ಲೆ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ₹60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇರೆಗೆ ಅಮಾನತುಗೊಂಡಿರುವುದು ಭ್ರಷ್ಟಾಚಾರಕ್ಕೆ ತಾಜಾ ಉದಾಹರಣೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.