
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ ಹಾಗೂ ಚನ್ನನಕೆರೆ ಮಾರ್ಗವಾಗಿ ಹಾದು ಹೋಗುವ ವಿ.ಸಿ. ಸಂಪರ್ಕ ನಾಲೆಯ ಸುರಂಗಕ್ಕೆ ಅಕ್ರಮ ಕಲ್ಲು ಗಣಿಗಾರಿಕೆಗೆಂದು ಬಳಸುವ ರಿಗ್‌ಬೋರ್‌ನಿಂದ ಬಿರುಕು ಬಿಡುವ ಆತಂಕವಿದ್ದು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಗಣಿ ಮತ್ತು ಭೂವಿಜ್ಞಾನ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ರಪಡಿಸಿದರು.
ವಿ.ಸಿ. ಸಂಪರ್ಕ ನಾಲೆಯ 1,200 ಮೀಟರ್ ನಾಲಾ ಸುರಂಗವಿದ್ದು ಸುರಂಗದ ಮುಖೇನ ಟಿ. ನರಸೀಪುರ, ಮಳವಳ್ಳಿ ತಾಲ್ಲೂಕಿನ 75 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶಕ್ಕೆ ಹಾಗೂ ಕೆರೆಕಟ್ಟೆಗಳಿಗೆ ನೀರು ಒದಗಿಸಲಾಗುತ್ತಿದೆ. ಈ ವ್ಯಾಪ್ತಿಯ ಶ್ರೀರಂಗಪಟ್ಟಣದ ಬಳಿ ಇರುವ ಸುರಂಗದ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕಲ್ಲು ತೆಗೆಯಲೆಂದೇ ಅಪಾಯಕಾರಿ ರಿಗ್‌ಬೋರ್ ಮೂಲಕ ಬ್ಲಾಸ್ಟ್ ಮಾಡಿ ಭೂಮಿಯನ್ನೇ ಕಂಪಿಸಲಾಗುತ್ತಿದೆ. ಇದರಿಂದ ಸುರಂಗ ಮಾರ್ಗಕ್ಕೆ ಭಾರಿ ಅಪಾಯ ತಂದೊಡ್ಡಿರುವುದರಿಂದ ತಕ್ಷಣ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಅಪಾಯಕಾರಿ ಕಂದಕ
ದರಕಾಸ್ತು ಮೂಲಕ ರೈತರಿಗೆ ಮಂಜೂರಾಗಿರುವ ಜಮೀನುಗಳನ್ನು ರೈತರಿಂದ ಗುತ್ತಿಗೆ ಪಡೆದು ಗಣಿ ಇಲಾಖೆ ಅನುಮತಿ ಪಡೆಯದೆ ಮಣ್ಣು ಬಗೆದು ಗಣಿಗಾರಿಕೆ ನಡೆಸಲಾಗುತ್ತಿದೆ. ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ನೀಲನಕೊಪ್ಪಲು, ಸಿದ್ದಾಪುರ, ಹಂಗರಹಳ್ಳಿ, ಮುಂಡಗದೊರೆ ಸೇರಿದಂತೆ ಇತರೆ ಗ್ರಾಮಗಳಲ್ಲಿನ 160 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಕ್ಕೆಂದು ಸುಮಾರು 150 ರಿಂದ 250 ಅಡಿ ಆಳದವರೆಗೂ ಬಗೆಯಲಾಗಿದೆ. ಇದರಿಂದ ಅಪಾಯಕಾರಿ ಕಂದಕಗಳು ಉಂಟಾಗಿದ್ದು ವ್ಯವಸಾಯ ಮಾಡುವುದಕ್ಕೂ ಸಾಧ್ಯವಾಗದಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಂದಾಯ ಇಲಾಖೆಯಡಿ ಕ್ರಮ ಜರುಗಿಸಿ ಮಂಜೂರಾತಿ ರದ್ದುಪಡಿಸಬೇಕು. ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಕಲ್ಲು ಕ್ವಾರಿ ನಡೆಸಿದ ಕ್ರಷರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಬೇಕು. ಸರ್ಕಾರಕ್ಕೆ ರಾಜಧನ ನಷ್ಟದ ವಸೂಲಿಗೆ ಮುಂದಾಗಬೇಕು. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 52 ಕ್ರಷರ್‌ಗಳು ಇವೆ. ಇದರಲ್ಲಿ 40 ಕ್ರಷರ್‌ಗಳು ಸಿ.ಫಾರಂ ಅನುಮತಿ ಪಡೆದಿರುತ್ತದೆ. 22 ಕಲ್ಲು ಗಣಿಗುತ್ತಿಗೆಂದು ಇಲಾಖೆಯಿಂದ ಅನುಮತಿ ಪಡೆದಿದ್ದು 17 ಕ್ವಾರೆಗಳಿಗೆ ಸ್ಫೋಟಕ ಪರವಾನಗಿ ಪಡೆದಿದ್ದಾರೆ. 120ಕ್ಕೂ ಹೆಚ್ಚು ಅಕ್ರಮ ಕಲ್ಲು ಕ್ವಾರೆಗಳು ಚಟುವಟಿಕೆ ನಡೆಸಲಾಗುತ್ತಿದೆ. ಬ್ಲಾಸ್ಟಿಂಗ್ ಮಾಡಲೆಂದು ಜಿಲೆಟಿನ್, ಕೇಫು, ಉಪ್ಪು ಸಾಮಗ್ರಿಗಳನ್ನು ಆಟಿಕೆಗಳಂತೆ ಬಳಸಿ ಪರಿಸರ ನಾಶ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನಾಗೇಂದ್ರಸ್ವಾಮಿ, ಎಸ್.ಮಂಜೇಶ್‌ಗೌಡ, ಮಹೇಶ್ ಕಾಳೇನಹಳ್ಳಿ, ತೇಜಸ್ ಕೋಡಿಶೆಟ್ಟಿಪುರ, ಹೊನ್ನಪ್ಪ ಗಂಜಾಂ, ಶಿವಳ್ಳಿ ಚಂದ್ರು, ರವಿಚಂದ್ರ, ಕಕ್ಕೂರು ರಮೇಶ್ ಭಾಗವಹಿಸಿದ್ದರು.
‘ಕ್ರಷರ್ ದೂಳಿನಿಂದ ನೀರು ಮಲಿನ’
‘ಕಾಳೇನಹಳ್ಳಿ ಸ.ನಂ.21 ರಲ್ಲಿ 7.20 ಎಕರೆ ಕೆರೆ ವಿಸ್ತೀರ್ಣವಿದ್ದು ಕೆರೆಯ ಅಂಗಳದಲ್ಲಿ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಉದ್ಯಮ (ಕ್ರಷರ್) ನಡೆಯುತ್ತಿದ್ದು ಕೆರೆ ಅಂಗಳಕ್ಕೆ ಜಲ್ಲಿ ಕ್ರಷರ್ ತ್ಯಾಜ್ಯವನ್ನು ಸುರಿಯುತ್ತಿದೆ. ಜಲ್ಲಿ ಕ್ರಷರ್ ದೂಳಿನಿಂದ ಕೆರೆಯ ನೀರು ಮಲಿನವಾಗಿ ಜನ ಜಾನುವಾರುಗಳಿಗೆ ಪ್ರಾಣಿಪಕ್ಷಿ ಸಂಕುಲಕ್ಕೆ ಮಾರಕವಾಗುತ್ತಿದೆ’ ಎಂದು ಆರೋಪಿಸಿದರು.
‘ಕ್ರಷರ್ ಮಾಲೀಕರು ಕೆರೆಕಟ್ಟೆ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ತಾಲ್ಲೂಕು ಆಡಳಿತ ಮತ್ತು ಅರಣ್ಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ನ್ಯಾಯಾಲಯ ಹೇಳಿದ್ದು ಅದರಂತೆ ಸಂಬಂಧಿತ ಕ್ರಷರ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆದರೂ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದನ್ನು ನೋಡಿಯೂ ಗಣಿ ಇಲಾಖೆಯು ನಿರ್ಲಕ್ಷ್ಯ ವಹಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.