
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಮಾಲೀಕರೊಂದಿಗೆ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರೈತ ಸಂಘದ (ಮೂಲ ಸಂಘಟನೆ) ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆರೋಪಿಸಿದರು.
ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಇರುವುದರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೂ ಶ್ರೀರಂಗಪಟ್ಟಣದಲ್ಲಿ ಕಲ್ಲು ಗಣಿಗಾರಿಕೆ ಉಪಟಳ ಹೆಚ್ಚಾಗಿದೆ. ಇದನ್ನು ತಡೆಯಲು ತಾಲ್ಲೂಕು ಆಡಳಿತ ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿ, ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಕಿಡಿಕಾರಿದರು.
ಈ ಭಾಗದ ಕಾಳೇನಹಳ್ಳಿ, ಆಲಗೂಡು, ಜಕ್ಕನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಹಾಗು ಗ್ರಾಮಸ್ಥರು ಬಾಧಿತರಾಗಿದ್ದಾರೆ. ಜೊತೆಗೆ ವಿ.ಸಿ.ಸಂಪರ್ಕ ನಾಲೆಯ 1.2 ಕಿ.ಮೀ. ಉದ್ದದ ಸುರಂಗದ ಪಕ್ಕದಲ್ಲಿ 20ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿವೆ. ಐದಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳು ಎಗ್ಗಿಲ್ಲದೇ ರಿಗ್ ಬೋರ್ ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ನಾಲಾ ಸುರಂಗ ಕುಸಿಯುವ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ಸುರಂಗಕ್ಕೆ ಹಾನಿಯಾದರೆ ಬನ್ನೂರು, ಟಿ.ನರಸೀಪುರ, ಮಳವಳ್ಳಿ ಭಾಗದ ರೈತರಿಗೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಕಾಳೇನಹಳ್ಳೀ ಸರ್ವೇ ನಂ.21ರಲ್ಲಿ 7.20 ಎಕರೆಯ ಕೆರೆ ಮತ್ತು ಗೋಮಾಳ ಅತಿಕ್ರಮಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ದೂರಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಮುಖಂಡರಾದ ರವೀಚಂದ್ರ, ಟಿ.ನರಸೀಪುರ ಕುಕ್ಕೂರ್ ರಾಜು ಇದ್ದರು.
‘ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ’
ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಮಾತನಾಡಿ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಗೆ ಮನವಿ ಮಾಡಿದಾಗ ಅಧಿಕಾರಿಗಳು ಗಣಿಗಾರಿಕೆ ಮುಚ್ಚಿಸಿದ್ದರು. ಆದರೆ ಅದು ಈಗ ಕಡತಗಳಲ್ಲಿ ಮಾತ್ರ ಸ್ಥಗಿತಗೊಂಡು ರಾತ್ರೋರಾತ್ರಿ ಮರು ಪ್ರಾರಂಭವಾಗಿದೆ ಎಂದು ದೂರಿದರು. ಅಕ್ರಮ ಗಣಿಗಾರಿಕೆ ಹಾಗೂ ಕ್ರಷರ್ ನಡೆಯುವುದಕ್ಕೆ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಕೆಲವು ರಾಜಕಾರಣಿಗಳ ಬೆಂಬಲವಿದೆ. ಕೆಲವು ಕ್ರಷರ್ ಮತ್ತು ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದ ನೆಪದಲ್ಲಿ ವ್ಯಾಪ್ತಿ ಮೀರಿ ನಡೆಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ರಾಜಧನ ನಷ್ಟವಾಗಿದ್ದು ಜಿಲ್ಲಾಧಿಕಾರಿ ಕ್ರಮವಹಿಸಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.