
ಶ್ರೀರಂಗಪಟ್ಟಣ: ತಾಲ್ಲೂಕಿನ ಚಿನ್ನಾಯಕನಹಳ್ಳಿ ಬಳಿ, ಕೃಷಿ ಜಮೀನಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿಯಮ ಬಾಹಿರವಾಗಿ ರಸ್ತೆ ನಿರ್ಮಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತರೊಬ್ಬರು ಬುಧವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣ ಸಮೀಪದ ಗಂಜಾಂನ ರೈತ ನಂಜಪ್ಪ ತಮ್ಮ ಜಮೀನಿನ ದಾಖಲೆ ಹಿಡಿದು ಪ್ರತಿಭಟಿಸಿದರು. ‘ಚಿನ್ನಾಯಕನಹಳ್ಳಿ ಸ.ನಂ. 173/01ರಲ್ಲಿ ನನ್ನ ಬಾಬ್ತು 30 ಗುಂಟೆ ಕೃಷಿ ಜಮೀನು ಇದೆ. ಸದರಿ ಜಮೀನಿಗೆ ಹದ್ದುಬಸ್ತು ಕೂಡ ಆಗಿದೆ. ಪ್ರಭಾವಿ ವ್ಯಕ್ತಿಯೊಬ್ಬರ ತೋಟದ ಮನೆಗೆ ರಸ್ತೆ ಮಾಡಿಕೊಡುವ ಉದ್ದೇಶದಿಂದ ನನ್ನ ಹಿಡುವಳಿ ಜಮೀನಿನಲ್ಲಿ ರಸ್ತೆ ಮಾಡುತ್ತಿದ್ದಾರೆ’ ಎಂದು ರೈತ ನಂಜಪ್ಪ ದೂರಿದರು.
‘ಸರ್ಕಾರಿ ದಾಖಲೆಗಳಲ್ಲಿ ರಸ್ತೆಯ ಬಗ್ಗೆ ಉಲ್ಲೇಖ ಇಲ್ಲದಿದ್ದರೂ ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಕಬ್ಬು ಮತ್ತು ಮರಗಳನ್ನು ನಾಶ ಮಾಡಿದ್ದಾರೆ. ನನ್ನ ಅಧಿಕೃತ ಜಮೀನನ್ನು ನನಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಎದುರು ಕುಟುಂಬ ಸದಸ್ಯರ ಜತೆಗೂಡಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ’ ಎಂದು ನಂಜಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.