ADVERTISEMENT

ನಮ್ಮ ಕಾಲದಲ್ಲಿ ಡ್ರಗ್ಸ್‌ ದಂಧೆ ಇರಲಿಲ್ಲ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:45 IST
Last Updated 19 ಸೆಪ್ಟೆಂಬರ್ 2020, 12:45 IST
   

ನಾಗಮಂಗಲ (ಮಂಡ್ಯ): ‘ನಾನೂ ಸಾಕಷ್ಟು ಚಲನಚಿತ್ರ ನಿರ್ಮಾಣ ಮಾಡಿದ್ದೇನೆ, ನಮ್ಮ ಕಾಲದಲ್ಲಿ ಡ್ರಗ್ಸ್‌ ದಂಧೆ ಎಂಬುದು ಇರಲಿಲ್ಲ. ಆದರೆ ಇತ್ತೀಚೆಗೆ ಇವೆಲ್ಲ ಕೇಳಿಬರುತ್ತಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇತ್ತೀಚೆಗೆ ಹೊಸದೊಂದು ಚಿತ್ರ ನಿರ್ಮಾಣ ಮಾಡಿದ್ದೇನೆ. ಆಗಲೂ ಡ್ರಗ್ಸ್‌ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈಗ ತನಿಖೆ ನಡೆಯುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕನಾಗಿ ಈಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದರು.

ADVERTISEMENT

ರೈತರ ಪ್ರತಿಭಟನೆ: ತಾಲ್ಲೂಕಿನಲ್ಲಿ ಬೃಹತ್‌ ಕೈಗಾರಿಕಾ ವಸಾಹತು ನಿರ್ಮಿಸಲು ಕರ್ನಾಟಕ ಕೈಗಾರಿಕ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಸೂಚನೆ ಹೊರಡಿಸಿರುವುದಕ್ಕೆ ಶನಿವಾರ ರೈತರು ಪ್ರತಿಭಟನಾ ಸಭೆ ನಡೆಸಿದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ ‘ನಾನು ಮುಖ್ಯಮಂತ್ರಿಯಾಗಿದ್ದಾಗ 500 ಎಕರೆ ಸರ್ಕಾರಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಯೋಜನೆ ರೂಪಿಸಿದ್ದೆ. ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಸರ್ಕಾರ 2 ಸಾವಿರ ಎಕರೆಗೂ ಹೆಚ್ಚು ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ರೈತರ ಫಲವತ್ತಾದ ಭೂಸ್ವಾದೀನಕ್ಕೆ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಈ ಭಾಗದ ರೈತರ ವಿರೋಧವಿದೆ. ನಾನು ರೈತರಿಂದ ಮಾಹಿತಿ ಸಂಗ್ರಹ ಮಾಡಿದ್ದು ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.