
ಮಂಡ್ಯ: ‘ಮೈಸೂರು ಷುಗರ್ ಕಂಪನಿ’ಯಲ್ಲಿ (ಮೈಷುಗರ್) ಅವ್ಯವಹಾರ ಮತ್ತು ಅಕ್ರಮ ನೇಮಕಾತಿಗಳ ಆರೋಪಗಳ ಕುರಿತು ಸಮಗ್ರ ತನಿಖೆಗೆ ನೇಮಿಸಿರುವ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕವಾಡ ನೇತೃತ್ವದ ತಂಡ ಬುಧವಾರ ಕಾರ್ಖಾನೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿತು.
ಪುಣೆಯ ಶುಗರ್ಸ್ ಎಂಜಿನಿಯರಿಂಗ್ ಮತ್ತು ರಿನೀವಬಲ್ ಎನರ್ಜಿ ಡಿಪಾರ್ಟ್‌ಮೆಂಟ್ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಬಿ.ಎಸ್. ರಾಜಗೋಪಾಲ್, ತಾಂತ್ರಿಕ ಸಲಹೆಗಾರ ಸಿ.ಬಿ. ಪಾಟೀಲ, ಮುಜಾವರ ಬಹದ್ದೂರ್ ಅಲಿ ಇಬ್ರಾಹಿಂ ಲಾತೂರು ತನಿಖಾ ತಂಡದಲ್ಲಿದ್ದಾರೆ.
2021–22ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅವ್ಯವಹಾರದಿಂದ ಕಂಪನಿಗಾದ ಆರ್ಥಿಕ ನಷ್ಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸೂಚಿಸಿದೆ.
ಕಾರ್ಖಾನೆಯಲ್ಲಿ ಅಕ್ರಮ, ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರು ಅರ್ಜಿ ಸಲ್ಲಿಸಿದ್ದರು. ತನಿಖಾ ತಂಡದ ಸದಸ್ಯರು ಕಾರ್ಖಾನೆಯ ವಿಭಾಗವಾರು ಅಧಿಕಾರಿ, ಸಿಬ್ಬಂದಿ ಕರೆಸಿ, ದಾಖಲೆ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.
ತನಿಖಾ ತಂಡವು ಮೈಷುಗರ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. 2024-25 2025-26ನೇ ಸಾಲಿನಲ್ಲಿ ಆರ್ಥಿಕ ಲೋಪವಾಗಿಲ್ಲ ಎಂದು ಮಾಹಿತಿ ಕೊಡಲಾಗಿದೆ– ಸಿ.ಡಿ. ಗಂಗಾಧರ್ ಅಧ್ಯಕ್ಷ ಮೈಷುಗರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.