ADVERTISEMENT

ಬೋನಸ್‌ ಹೆಚ್ಚಳ ಆಗ್ರಹಿಸಿ ವಿಮಾ ಪ್ರತಿನಿಧಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 10:35 IST
Last Updated 30 ಸೆಪ್ಟೆಂಬರ್ 2022, 10:35 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಎಲ್‌ಐಸಿ ಕಚೇರಿ ಎದರು ಶುಕ್ರವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಎಲ್‌ಐಸಿ ಕಚೇರಿ ಎದರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ಭಾರತೀಯ ಜೀವ ವಿಮಾ ಪಾಲಿಸಿದಾರರ ಬೋನಸ್‌ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಭಾರತೀಯ ಜೀವವಿಮಾ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

ಪಾಲಿಸಿದಾರರ ಪಾಲಿಸಿಗಳ ಮೇಲಿನ ಸಾಲದ ಬಡ್ಡಿ ದರ ಮತ್ತು ಪ್ರೀಮಿಯಂ ಶುಲ್ಕದ ಬಡ್ಡಿದರ ಕಡಿಮೆ ಮಾಡಬೇಕು. ಪಾಲಿಸಿದಾರರ ಬೋನಸ್‌ ಹೆಚ್ಚಿಸಬೇಕು. ಜಿಎಸ್‌ಟಿ ತೆಗೆದು ಹಾಕಬೇಕು. ಐದು ವರ್ಷಗಳ ಅವಧಿಯೊಳಗಿನ ರದ್ದಾದ ಪಾಲಿಸಿಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

1938 ರಿಂದ ಇರುವ ಸ್ವಾಟಿಕ್‌ ಆಯೋಗದ ದರಗಳನ್ನು ಹೆಚ್ಚಿಸಬೇಕು. ಪ್ರತಿನಿಧಿಗಳ ಕಲ್ಯಾಣ ನಿಧಿ ರಚನೆ ಮಾಡಬೇಕು. ಪ್ರತಿನಿಧಿಗಳ ಗ್ರಾಚುಯಿಟಿಯನ್ನು ಹೆಚ್ಚಿಸಬೇಕು. ಪ್ರತಿನಿಧಿಗಳ ಗುಂಪು ವಿಮೆ ಮತ್ತು ಅವಧಿಯ ವಯಸ್ಸನ್ನು ಹೆಚ್ಚಿಸಬೇಕು. ಎಲ್ಲಾ ಪ್ರತಿನಿಧಿಗಳಿಗೆ ಗ್ರೂಪ್‌ ಮೆಡಿಕ್ಲೈಂ ನೀಡಬೇಕು. ಎಲ್ಲ ಪ್ರತಿನಿಧಿಗಳಿಗೆ ಪಿಂಚಣಿ ನೀಡಬೇಕು. ನೇರ ಪ್ರತಿನಿಧಿಗಳಿಗಾಗಿ ಪ್ರಯೋಜನಗಳನ್ನು ನೀಡಬೇಕು. ಪ್ರತಿನಿಧಿಗಳ ಕ್ಲಬ್‌ ಮೆಂಬರ್ಸ್‌ ಸದಸ್ಯರುಗಳಿಗೆ ಗೃಹ ಸಾಲದ ಬಡ್ಡಿಯನ್ನು ಶೇ 5ಕ್ಕೆ ಇಳಿಸಬೇಕು ಎಂದು ಆಗ್ರಹ ಪಡಿಸಿದರು.

ಒಕ್ಕೂಟದ ಸಹ ಕಾರ್ಯದರ್ಶಿ ಎಂ.ವಿ.ಸ್ವರ್ಣಕುಮಾರ್ ಮಾತನಾಡಿ ‘ಪ್ರತಿನಿಧಿಗಳ ಸಮಸ್ಯೆ ಕುರಿತಂತೆ ಈಗಾಗಲೇ ಮೇಲ್ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದೆ. ಸಭೆಯಲ್ಲಿ ನಮ್ಮ ಪ್ರತಿನಿಧಿಗಳ ಪರವಾಗಿ ಹಾಗೂ ಸಮಸ್ಯೆ ಈಡೇರಿಸುವ ವಿಶ್ವಾಸವಿದೆ, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮನವಿ ಮಾಡಲಾಗಿದೆ. ಪ್ರತಿನಿಧಿಗಳಿಗೆ ಅನಾನುಕೂಲ ಸರಿಪಡಿಸಬೇಕು. ಶೇ 20 ರಷ್ಟು ಕಮಿಷನ್‌ ಇಳಿಸುತ್ತಿದ್ದಾರೆ, ಇದು ಆಗಬಾರದು, ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಆರ್‌.ಮಹೇಶ್, ಕಾರ್ಯದರ್ಶಿ ಕೆ.ಸಿ.ಮಹೇಶ್‌ಗೌಡ, ಖಜಾಂಚಿ ಡಿ.ಲಕ್ಷ್ಮಣ್‌, ನಿರ್ದೇಶಕರಾದ ಎ.ಎಸ್‌.ಗೌರೀಶ್‌, ವೈರಮುಡಿಗೌಡ, ಎನ್‌.ಈರೇಗೌಡ, ಎಂ.ರವಿಶಂಕರ್, ಟಿ.ರಾಮಕೃಷ್ಣ, ಎಚ್‌.ಎಂ.ಉದಯ್‌ಕುಮಾರ್, ರಮೇಶ್, ಸಿ.ಪಿ.ಜೈಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.