
ಮಳವಳ್ಳಿಯಲ್ಲಿ ಶನಿವಾರ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಶಂಕರ ಬಿದರಿ, ನಿಶ್ಚಲಾನಂದನಾಥ ಸ್ವಾಮೀಜಿ, ಮುಮ್ಮಡಿ ನಿರ್ವಾಣ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸ
ಮಳವಳ್ಳಿ: ‘ಯುವಸಮೂಹ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಇಂಥವರನ್ನು ಸರಿ ದಾರಿಗೆ ತರುವ ಕೆಲಸ ಮಾಡಬೇಕು. ಇಷ್ಟಲಿಂಗ ಪೂಜೆ ಕಲಿಸುವ ಮೂಲಕ ಯುವಕರನ್ನು ಸಮಾಜದಲ್ಲಿ ಉತ್ತಮ ಪಡಿಸಲು ನಿರ್ಧರಿಸಿದ್ದೇವೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ತಂದೆ– ತಾಯಂದಿರನ್ನು ವೃದ್ಧಾಶ್ರಮಕ್ಕೆ ಕಳಿಸುವ ಜನರನ್ನು ಬದಲಾಯಿಸಬೇಕಿದೆ. ಯುವಕರಿಗೆ ತರಬೇತಿ ನೀಡುವ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
₹650 ಕೋಟಿ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದವು. ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ₹250 ಕೋಟಿ ನೀಡಿದ್ದರು. ನಂತರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಅವರು ₹200 ಕೋಟಿ ಅನುದಾನ ನೀಡಿದ್ದು, ಮುಂದಿನ ಡಿಸೆಂಬರ್ ಒಳಗಡೆ ಅನುಭವ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಡಿನ ಯುವಸಮೂಹಕ್ಕೆ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳಿಂದ ಪ್ರೇರಣೆ ಸಿಗಬೇಕು. ಸುತ್ತೂರು ಮಠಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ಶ್ರೀಗಳು ಸಮಾಜಕ್ಕಾಗಿ ಮಾಡಿರುವ ಸೇವೆ ಅನನ್ಯ. ನೊಂದು ಬೆಂದು ಬಂದಿದ್ದ ಅನೇಕರಿಗೆ ದಾರಿ ದೀಪವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಅನೇಕ ಬಡ ವಿದ್ಯಾರ್ಥಿಗಳಿಗೆ ಊಟದೊಂದಿಗೆ ಶಿಕ್ಷಣ ನೀಡಿ ಅವರನ್ನು ದೊಡ್ಡ ದೊಡ್ಡ ಉನ್ನತ ಹುದ್ದೆಗೇರಿಸಲು ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘10ನೇ ಶತಮಾನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಲು ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳು ಧರ್ಮ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಒತ್ತು ನೀಡಿದ್ದಾರೆ. ಮಾನವೀಯತೆ, ಭಕ್ತಿ, ಕಾಯಕ ಸಂಸ್ಕೃತಿಯ ಆಧಾರದ ಮೇಲೆ ಕ್ಷೇತ್ರ ನಿಂತಿದೆ ಎಂದು ಬಣ್ಣಿಸಿದರು.
ವಿವಿಧ ಶಾಲೆಗಳ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಎಚ್.ಟಿ. ಮಂಜು, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಎಂ.ಬಿದರಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಕೆ.ಅನ್ನದಾನಿ, ಬಾಲರಾಜು, ನಿರಂಜನ್ ಕುಮಾರ್, ನಾಗಮಣಿ ನಾಗೇಗೌಡ, ಎಡಿಜಿಪಿ ನಂಜುಂಡಸ್ವಾಮಿ, ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್, ಮುಖಂಡರಾದ ಎಸ್.ಸಚ್ಚಿದಾನಂದ ಇಂಡುವಾಳು, ಎನ್.ಎಸ್.ಇಂದ್ರೇಶ್, ಲಕ್ಷ್ಮಿಅಶ್ವಿನ್ ಗೌಡ, ಸಂಗಮೇಶ್, ಅಶೋಕ್ ಜಯರಾಮು, ಸ್ವಾಮಿ ಪಾಲ್ಗೊಂಡಿದ್ದರು.
‘ವೀರಶೈವ ಲಿಂಗಾಯತ ಎರಡೂ ಒಂದೇ’: ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಎಂ.ಬಿದರಿ ಮಾತನಾಡಿ ‘ಕೆಲವರು ವೀರಶೈವ ಲಿಂಗಾಯತ ಬೇರೆ ಬೇರೆ ಎನ್ನುತ್ತಿದ್ದಾರೆ. ಬಸವಣ್ಣ ಅವರ ಹಾದಿಯಲ್ಲಿ ನಡೆಯುತ್ತಿರುವ ಸಿದ್ಧಗಂಗಾ ಮತ್ತು ಸುತ್ತೂರು ಸ್ವಾಮೀಜಿಗಳು ಹೇಳಿರುವಂತೆ ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದೆ. ಪರಸ್ಪರ ಸಹಕಾರ ಮನೋಭಾವನೆಯಿಂದ ನಮ್ಮ ಸಮಾಜದಲ್ಲಿ ನೊಂದಿರುವವರಿಗೆ ನೆರವು ನೀಡುವ ಕಾಯಕ ಮಾಡಬೇಕು. ಸರ್ಕಾರದ ಉಚಿತ ಯೋಜನೆಗಳು ಬೇಡ ಎಲ್ಲರೂ ಸ್ವಯಂ ದುಡಿದು ಜೀವನ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡೋಣ’ ಎಂದು ಕರೆ ನೀಡಿದರು.
‘ಒಳಪಂಗಡಗಳು ಒಗ್ಗೂಡಿದರೆ ಅಭಿವೃದ್ಧಿ ಸಾಧ್ಯ:’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ‘ಬಸವಣ್ಣ ಅವರ ಸಮ ಸಮಾಜ ನಿರ್ಮಾಣವಾಗಬೇಕಾದರೆ ವೀರವೈವ ಲಿಂಗಾಯತ ಸಮಾಜ ಎಲ್ಲ ಒಳಪಂಗಡಗಳು ವೈಮನಸ್ಸು ಮರೆತು ಒಗ್ಗೂಡಿದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲು ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ. ಆದರೆ ಅದು ಯಶಸ್ವಿಯಾಗಿಲ್ಲ ಮುಂದೆಯೂ ಆಗುವುದಿಲ್ಲ ಎಂದು ಹೇಳಿದರು. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ಕಾರ್ಯಕ್ರಮಕ್ಕೆ ಬಂದಿರುವೆ. ಅವರು ಮುಖ್ಯಮಂತ್ರಿಯಾಗಿದ್ದಾಗ ವೀರವೈವ ಒಕ್ಕಲಿಗ ಸೇರಿದಂತೆ ಎಲ್ಲ ಸಮಾಜದ ಮಠಗಳ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಅನುಭವ ಮಂಟಪಕ್ಕೂ ಅನುದಾನ ನೀಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.