ADVERTISEMENT

ಗುರಿ ಉನ್ನತವಾಗಿರಲಿ: ಎಸ್.ಸೋಮನಾಥ್

ಆದಿಚುಂಚನಗಿರಿ ವಿವಿಯ ಐದನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:48 IST
Last Updated 30 ಜುಲೈ 2025, 7:48 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿವಿಯ ಬಿಜಿಎಸ್ ಸಭಾಂಗಣದಲ್ಲಿ ನಡೆದ ಆದಿಚುಂಚನಗಿರಿ ವಿವಿಯ ಐದನೇ ಘಟಿಕೋತ್ಸವದಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು 
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿವಿಯ ಬಿಜಿಎಸ್ ಸಭಾಂಗಣದಲ್ಲಿ ನಡೆದ ಆದಿಚುಂಚನಗಿರಿ ವಿವಿಯ ಐದನೇ ಘಟಿಕೋತ್ಸವದಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು    

ನಾಗಮಂಗಲ: ‘ನಿಮ್ಮ ಗುರಿಗಳು ಉನ್ನತವಾಗಿರಲಿ. ಗೆಲುವು ಮಾತ್ರವೇ ಮುಖ್ಯವಲ್ಲ. ನಿರಂತರ ಪರಿಶ್ರಮದೊಂದಿಗೆ ಮುಂದುವರಿದರೆ ಗೆಲುವು ಇಂದಲ್ಲ, ನಾಳೆ ಸಿದ್ಧಿಸುತ್ತದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎಸ್.ಸೋಮನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಐದನೇ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ವಿನಯ, ಪ್ರಾಮಾಣಿಕತೆ ಮತ್ತು ಸಮಗ್ರತೆ ನಮ್ಮನ್ನು ನಿರಂತರ ಬೆಳೆಸುತ್ತದೆ ಎಂಬ ಪಾಠವನ್ನು ಇಸ್ರೊದಿಂದ ಕಲಿತಿದ್ದೇನೆ’ ಎಂದರು.

‘ಚಂದ್ರಯಾನ-3 ಲಕ್ಷಾಂತರ ಯುವಕರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಿದೆ. ಕಡಿಮೆ ವೆಚ್ಚದಲ್ಲಿಯೇ ಚಂದ್ರಯಾನ ಮಾಡಬಹುದು. ಖಾಸಗಿಯವರೂ ಬಾಹ್ಯಾಕಾಶ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿರುವುದು ಗಮನಾರ್ಹ. ಮನುಷ್ಯನು ಚಂದ್ರ, ಮಂಗಳನಲ್ಲಿ ನೆಲೆಸುವ ಬಗ್ಗೆಯೂ ಸಂಶೋಧನೆಯಾಗುತ್ತಿವೆ’ ಎಂದರು.

ADVERTISEMENT

‘ಎಐ ತಂತ್ರಜ್ಞಾನದ ಕುರಿತು ತರಗತಿಯಲ್ಲೂ ಕಲಿಸಬೇಕು. ಇದು ವಿಜ್ಞಾನ ಮತ್ತು ಗಣಿತ ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆ ನೀಡಲಿದೆ. ಮನರಂಜನೆ, ಮಿಲಿಟರಿ ಕ್ಷೇತ್ರವೂ ಪ್ರಭಾವಿತವಾಗುತ್ತಿದೆ. ಮತದಾನ ಪ್ರಕ್ರಿಯೆಯಲ್ಲೂ ಕ್ರಾಂತಿ ಮಾಡಲಿದೆ. ಮನೆಯಿಂದಲೇ ಮತ ಹಾಕುವ ವ್ಯವಸ್ಥೆಯೂ ಬರಬಹುದು’ ಎಂದರು.

‘ಸಂಶೋಧಕರು ದೇಶದ ಜ್ಞಾನ ಪರಂಪರೆಯತ್ತ ಗಮನಹರಿಸಬೇಕು. ವೇದಗಳಲ್ಲಿ ಜ್ಞಾನ ಸಂಪತ್ತಿದೆ. ಗಣಿತ, ಖಗೋಳ, ತತ್ವಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಜ್ಞಾನ ಸಂಪತ್ತು ಅಗಾಧವಾದುದು. ಬೇರೆ ದೇಶಗಳ ಸಂಸ್ಕೃತಿಗಳಿಗೆ ಹೋಲಿಸಿದರೆ ನಾವು ಬಹಳ ಮುಂದುವರಿದಿದ್ದೇವೆ. ನಿಮ್ಮ ಪ್ರತಿಭೆ, ಬುದ್ಧಿವಂತಿಕೆ, ಜ್ಞಾನ ದೇಶದ ಅಭಿವೃದ್ಧಿಗೆ ಬಳಕೆಯಾಗಲಿ’ ಎಂದರು.

‘ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿಶಾಲವಾಗಿ ಬೆಳೆದಿದೆ. ಇಲ್ಲಿ ಸಿಗುವ ಶಿಕ್ಚಣವು ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಗಳ ಸಮನ್ವಯತೆಯಾಗಿದೆ. ಮಠವು ಅಂಧಮಕ್ಕಳಿಗೂ ಶಾಲೆ ನಿರ್ಮಿಸಿರುವುದು ಪ್ರಶಂಸನೀಯ’ ಎಂದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಆದಿಚುಂಚನಗಿರಿ ವಿವಿ ಬಾಲಗಂಗಾಧರನಾಥ ಸ್ವಾಮೀಜಿಯ ಕನಸಾಗಿತ್ತು. ಅದನ್ನು ನನಸು ಮಾಡುವಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಯಶಸ್ವಿಯಾಗಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ನಾಡಿನ ಪ್ರಪ್ರಥಮ ಖಾಸಗಿ ಕೃಷಿ ಕಾಲೇಜು ಸ್ಥಾಪಿಸಿದ ಹೆಗ್ಗಳಿಗೆ ನಮ್ಮ ವಿಶ್ವವಿದ್ಯಾಲಯದ್ದು, ಅದಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಕಾರಣೀಕರ್ತರು’ ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಗೌರವಾಧ್ಯಕ್ಷ ಎನ್.ಎಸ್.ರಾಮೇಗೌಡ, ಆದಿಚುಂಚನಗಿರಿ ವಿವಿಯ ಕುಲಪತಿ ಎಸ್.ಎನ್.ಶ್ರೀಧರ್, ಕುಲಸಚಿವರಾದ ನಾಗರಾಜ್, ಸಿ.ಕೆ.ಸುಬ್ಬರಾಯ, ಚಂದ್ರಶೇಖರ ಶೆಟ್ಟಿ, ಎಂ.ಎ.ಶೇಖರ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಇದ್ದರು.

Cut-off box - 1882 ವಿದ್ಯಾರ್ಥಿಗಳಿಗೆ ‍ಪದವಿ ಪ್ರದಾನ ಘಟಿಕೋತ್ಸವದಲ್ಲಿ ಪದವಿ ಸ್ನಾತಕೋತ್ತರ ಪದವಿ ಪಿ.ಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ವೈದ್ಯಕೀಯ ಮತ್ತು ಸಂಬಂಧಿತ ಕೋರ್ಸ್‌ಗಳ 256 ಫಾರ್ಮಸಿಯ 210 ಎಂಜಿನಿಯರಿಂಗ್‌ನ 972 ನರ್ಸಿಂಗ್‌ನ 74 ನ್ಯಾಚುರಲ್‌ ಸೈನ್ಸಸ್‌ನ 114 ಮಾನವಿಕ ವಿಜ್ಞಾನದ 260 ವಿದ್ಯಾರ್ಥಿಗಳು ಸೇರಿ ಒಟ್ಟು 1882 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.  ರ‍್ಯಾಂಕ್ ಮತ್ತು ಚಿನ್ನದ ಪದಕ ದತ್ತಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.